ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನದ ಧ್ವನಿಗಳು ಮುಂದುವರಿದಿವೆ. ಸಚಿವ ಸಂಪುಟ ವಿಸ್ತರಣೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಬೇಸರವಿದ್ದು, ಇದೇ ಕಾರಣದಿಂದ ಅವರು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ತಮ್ಮ ತಂದೆ ಹಾಗೂ ಹಿರಿಯ ನಾಯಕ ರಾಜಣ್ಣ ಅವರಿಗೂ ತೀವ್ರ ಬೇಸರವಾಗಿದೆ ಎಂದು ಹೇಳಿದರು.
“ರಾಜಣ್ಣ ಅವರು ಯಾವಾಗಲೂ ನೇರವಾಗಿ ಮಾತನಾಡುವ ವ್ಯಕ್ತಿ. ಪಕ್ಷದಲ್ಲಿ ನೇರವಾಗಿ ಮಾತನಾಡುವವರಿಗೆ ಅವಕಾಶ ಇಲ್ಲದಂತಾಗಿದೆ. ನಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ನಿರೀಕ್ಷೆ ಈಡೇರಿಲ್ಲ. ಇದರಿಂದ ಸಹಜವಾಗಿಯೇ ಬೇಸರವಾಗಿದೆ. ರಾಜಣ್ಣ ಅವರ ವಿರುದ್ಧ ಯಾವುದೇ ಆರೋಪ ಇರಲಿಲ್ಲ. ಹಿಂದೆ ನಡೆದ ವಿಚಾರ ಆಗಲೇ ಮುಕ್ತಾಯವಾಗಿತ್ತು,” ಎಂದು ತಿಳಿಸಿದರು.
ಪಕ್ಷದ ಕಾರ್ಯವೈಖರಿಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ರಾಜೇಂದ್ರ ರಾಜಣ್ಣ, “ಪಕ್ಷ ಈ ರೀತಿಯ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಹಾಗಾದರೆ ಪಕ್ಷಕ್ಕೇ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗಬಹುದು,” ಎಂದು ಎಚ್ಚರಿಸಿದರು.
ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಬೇಸರವಿದೆ ಎಂದರೆ ಪಕ್ಷ ಬಿಡುವುದಿಲ್ಲ. ಪಕ್ಷದ ಒಳಗೆಯೇ ನಮ್ಮ ಹೋರಾಟ ಮುಂದುವರಿಯಲಿದೆ,” ಎಂದು ಹೇಳಿದರು.



