ವಿಜಯಸಾಕ್ಷಿ ಸುದ್ದಿ, ಗದಗ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ, ರೈತಪರ ಯುವ ಮುಖಂಡ ಪ್ರಭುರಾಜಗೌಡ ವಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ನಗರದ ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಕಿಟ್ ಹಾಗೂ ರೈತರಿಗೆ ಸಾವಯವ ಗೊಬ್ಬರದ ಕಿಟ್‌ಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಭುರಾಜಗೌಡ ಪಾಟೀಲ ಅವರ ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಇತರೆ ಶೈಕ್ಷಣಿಕ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಇದೇ ವೇಳೆ ರೈತರಿಗೆ ಸಾವಯವ ಕೃಷಿ ಉತ್ತೇಜಿಸುವ ಉದ್ದೇಶದಿಂದ ಸಾವಯವ ಗೊಬ್ಬರದ ಕಿಟ್‌ಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಗಣೇಶ ಸುಲ್ತಾನಪೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಹಾಗೂ ರೈತರಿಗೆ ಸಾವಯವ ಕೃಷಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಕಳೆದ ಎರಡು ದಶಕಗಳಿಂದ ಕನ್ನಡಪರ, ರೈತಪರ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಭುರಾಜಗೌಡ ಪಾಟೀಲ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಇಮರಾಪೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ಹಾಗೂ ರೈತರಿಗೆ ಸಾವಯವ ಗೊಬ್ಬರ ವಿತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿಷಮುಕ್ತ ಆಹಾರ ಉತ್ಪಾದನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆ ಹಾಗೂ ಡಾ. ಗಣೇಶ ಸುಲ್ತಾನಪೂರ ಅವರ ವತಿಯಿಂದ ಪ್ರಭುರಾಜಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭುರಾಜಗೌಡ ಪಾಟೀಲ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಶಿಸ್ತು, ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತಿದ್ದು, ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಈರಪ್ಪ ಜಡಿ, ವಿರುಪಾಕ್ಷಪ್ಪ ಕೋತಂಬ್ರಿ, ಬಾಪುಗೌಡ ಮಲ್ಲಾಪೂರ, ಯುವ ಮುಖಂಡರಾದ ಚೇತನಕುಮಾರ ಹುಡೇದ, ಅಜಯ ಕುಲಕರ್ಣಿ, ಸಂತೋಷ ಪಾಟೀಲ, ಯಲ್ಲಪ್ಪ ಜಡಿ, ಸಂಗಪ್ಪ ಮೇಟಿ, ಶಿಕ್ಷಣ ಸಂಸ್ಥೆಯ ಪ್ರಮುಖರಾದ ಡಾ. ಮುತ್ತು ಜಡಿ, ಹೀರಾಲಾಲ ಸಿಂಗ್ರಿ, ರುದ್ರಗೌಡ ಪಾಟೀಲ, ಲೋಕೇಶ ಮಲ್ಲಿಗವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ರೈತರಿಗೆ ಸಾವಯವ ಕೃಷಿಯ ಅರಿವು ನೀಡುವ ಕಾರ್ಯಗಳು ಸಮಾಜಮುಖಿ ಚಟುವಟಿಕೆಗಳಾಗಿವೆ. ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ.”
ಡಾ. ಗಣೇಶ ಸುಲ್ತಾನಪೂರ



