ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ. ಗೆಲುವಿನ ಜತೆಗೆ ಸೋಲನ್ನೂ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣ ಕ್ರೀಡಾಪಟುಗಳಲ್ಲಿ ಬೆಳೆಯಬೇಕು ಎಂದು ಮೋಹನ ಲಿಂಬಿಕಾಯಿ ಹೇಳಿದರು.
ಹುಲಕೋಟಿಯ ಸ್ಪೂರ್ತಿ ಸ್ವತಂತ್ರ ಪದವಿಪೂರ್ವ ಕಾಲೇಜು ಮೈದಾನದಲ್ಲಿ 2026-27ನೇ ಸಾಲಿನ ಗದಗ ತಾಲೂಕು ಮಟ್ಟದ ‘ಎ’ ವಲಯದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಪದವಿಪೂರ್ವ ಕಾಲೇಜುಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಕಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಫುಟ್‌ಬಾಲ್ ಹಾಗೂ ಕ್ರಿಕೆಟ್ ತರಬೇತಿ ಕ್ರೀಡಾಂಗಣಗಳ ಜತೆಗೆ ನಗರದಲ್ಲಿ ನಾಲ್ಕೈದು ಈಜುಕೊಳಗಳನ್ನು ನಿರ್ಮಿಸಲಾಗಿದೆ. ಕ್ರೀಡಾಪಟುಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ರಮೇಶ ಹೊನ್ನಿನಾಯ್ಕರ ಕ್ರೀಡಾಪಟುಗಳನ್ನು ಅಭಿನಂದಿಸಿ, ಪ್ರೋತ್ಸಾಹಿಸಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಕ್ಬರಸಾಬ ಬಬರ್ಚಿ, ಜಿ.ಕೆ. ಆದಪ್ಪಗೌಡ್ರ, ಎಸ್.ಕೆ. ಪಾಟೀಲ, ಸಚಿನ್ ಡಿ. ಪಾಟೀಲ, ವ್ಹಿ.ಎಂ. ಪಾಟೀಲ, ಬಿ.ಎನ್. ಪಾಟೀಲ, ಕೃಷ್ಣಾ ಓದುಗೌಡರ, ಚಾಂದಸಾಬ ಕೊಟ್ಟೂರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ವ್ಹಿ. ಚರಣಕುಮಾರ ಸ್ವಾಗತಿಸಿದರು. ಪ್ರೊ. ಅಶ್ವಿನಿ ಓದುಗೌಡರ ವಂದಿಸಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಕ್ರೀಡಾ ಮನೋಭಾವದಿಂದ ಸ್ಪರ್ಧಿಸುವುದು ಅತ್ಯಂತ ಮುಖ್ಯ. ಕ್ರೀಡಾಪಟುಗಳು ಗೆಲುವಿನಷ್ಟೇ ಕ್ರೀಡಾಸ್ಫೂರ್ತಿಗೂ ಮಹತ್ವ ನೀಡಬೇಕು.
— ಮೋಹನ ಲಿಂಬಿಕಾಯಿ

