ಚೆನ್ನೈ: ಸ್ಟಾರ್ ನಟಿ ಶ್ರೀಲೀಲಾಗೆ ಮತ್ತೊಂದು ನಿರಾಸೆ ಎದುರಾಗಿದೆ. ತಮಿಳಿನ ಸೂಪರ್ಸ್ಟಾರ್ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೊನೆಯ ಕ್ಷಣದಲ್ಲಿ ಕೈತಪ್ಪಿದ್ದು, ಆ ಪಾತ್ರಕ್ಕೆ ಇದೀಗ ಕನ್ನಡದ ಮೂಲದ ನಟಿ ಖಯಾದು ಲೋಹರ್ ಆಯ್ಕೆಯಾಗಿದ್ದಾರೆ.
ಚಿತ್ರದ ಕುರಿತು ಶ್ರೀಲೀಲಾ ಹಾಗೂ ಚಿತ್ರತಂಡದ ನಡುವೆ ಮಾತುಕತೆ ನಡೆದಿದ್ದರೂ, ಅಂತಿಮ ಹಂತದಲ್ಲಿ ನಾಯಕಿ ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾಗೆ ಕೈತಪ್ಪಿದ ಪ್ರಮುಖ ಚಿತ್ರಗಳ ಸಂಖ್ಯೆ ಮೂರಕ್ಕೇರಿದೆ.
ಈ ಹಿಂದೆ ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಸಿನಿಮಾಕ್ಕೆ ಮೊದಲ ಆಯ್ಕೆಯಾಗಿದ್ದ ಶ್ರೀಲೀಲಾ ಬಳಿಕ ಆ ಪ್ರಾಜೆಕ್ಟ್ನಿಂದ ಹೊರಬಂದಿದ್ದರು. ನಂತರ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ ಚಿತ್ರದಿಂದಲೂ ಹಿಂದೆ ಸರಿದಿದ್ದು, ಎರಡೂ ಚಿತ್ರಗಳಲ್ಲಿ ಭಾಗ್ಯಶ್ರೀ ಭೋರ್ಸೆ ಅವಕಾಶ ಪಡೆದಿದ್ದರು.
ಇದೀಗ ಅಜಿತ್ ಸಿನಿಮಾದಲ್ಲೂ ಶ್ರೀಲೀಲಾ ಬದಲಿಗೆ ಖಯಾದು ಲೋಹರ್ ಅವರನ್ನು ಚಿತ್ರತಂಡ ಅಂತಿಮಗೊಳಿಸಿದ್ದು, ತಮಿಳು ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ.
ಆದಾಗ್ಯೂ ಶ್ರೀಲೀಲಾ ಅವರ ವೃತ್ತಿಜೀವನ ವೇಗ ಕಡಿಮೆಯಾಗಿಲ್ಲ. ಧನುಷ್ ಜೊತೆಗಿನ ತಮಿಳು ಸಿನಿಮಾ, ತೆಲುಗಿನಲ್ಲಿ ಎರಡು ಹೊಸ ಪ್ರಾಜೆಕ್ಟ್ಗಳು ಹಾಗೂ ಬಾಲಿವುಡ್ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಬಿಗ್ ಬಜೆಟ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಿರಂತರವಾಗಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀಲೀಲಾ ಇನ್ನೂ ಬೇಡಿಕೆಯ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.



