ಮುಂಬೈ: ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಿದಾ ಖಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್‌ರನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ನಾಸಿಕ್ ಎಸ್‌ಐಟಿ, ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಹಾಗೂ ಕ್ರೈಂ ಬ್ರಾಂಚ್ ತಂಡಗಳು ಎರಡು ದಿನಗಳಿಂದ ನಾರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯ ಫ್ಲಾಟ್ ಮೇಲೆ ನಿಗಾ ಇಟ್ಟಿದ್ದವು. ಬಳಿಕ ಗುರುವಾರ ಕಾರ್ಯಾಚರಣೆ ನಡೆಸಿ ನಿದಾ ಖಾನ್‌ರನ್ನು ಬಂಧಿಸಲಾಯಿತು. ಬಂಧನದ ಬಳಿಕ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ.
ತಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದ ನಿದಾ ಖಾನ್, ಬಂಧನ ತಪ್ಪಿಸಲು ನಿರೀಕ್ಷಣಾ ಜಾಮೀನು ಕೋರಿದ್ದಳು. ಆದರೆ ಗಂಭೀರ ಆರೋಪಗಳ ಹಿನ್ನೆಲೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು.
ಪ್ರಕರಣ ಬೆಳಕಿಗೆ ಬಂದ ತಕ್ಷಣ ಟಿಸಿಎಸ್ ಸಂಸ್ಥೆ ಏಪ್ರಿಲ್ 9ರಂದು ನಿದಾ ಖಾನ್‌ರನ್ನು ಅಮಾನತುಗೊಳಿಸಿತ್ತು. ಕಂಪನಿಯ ಆಂತರಿಕ ನೆಟ್‌ವರ್ಕ್ ಮತ್ತು ಅಧಿಕೃತ ಪ್ರವೇಶವನ್ನು ಕೂಡ ರದ್ದುಗೊಳಿಸಲಾಗಿತ್ತು. 2021ರಲ್ಲಿ ಪ್ರೊಸೆಸ್ ಅಸೋಸಿಯೇಟ್ ಆಗಿ ಸೇರಿದ್ದ ನಿದಾ ಖಾನ್, ವಿವಾದ ಸಾರ್ವಜನಿಕವಾಗುವ ಕೆಲ ತಿಂಗಳ ಮೊದಲು ನಾಸಿಕ್‌ನಿಂದ ಮುಂಬೈ ಕಚೇರಿಗೆ ವರ್ಗಾವಣೆಗೊಂಡಿದ್ದಳು ಎನ್ನಲಾಗಿದೆ.
ಈ ಪ್ರಕರಣವು ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನ ಬಳಿಕ ಬಹಿರಂಗವಾಗಿತ್ತು. ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಹಾಗೂ ಆತ ಈಗಾಗಲೇ ವಿವಾಹಿತ ಎಂಬ ವಿಚಾರ ಮುಚ್ಚಿಟ್ಟಿದ್ದ ಎಂದು ಮಹಿಳೆ ಆರೋಪಿಸಿದ್ದರು. ಇದೇ ವೇಳೆ ದಾನಿಶ್ ಶೇಖ್ ಸಹೋದರಿಯಾದ ನಿದಾ ಖಾನ್ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳಾಡಿ ಮತಾಂತರಕ್ಕೆ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಾದ ಬಳಿಕ ಮತ್ತಷ್ಟು ಮಹಿಳಾ ಉದ್ಯೋಗಿಗಳು ಮುಂದೆ ಬಂದು ಮಾನಸಿಕ ಹಾಗೂ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ.



