ಬೆಂಗಳೂರು / ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮುಖ್ಯಮಂತ್ರಿಯವರಿಗೆ ಶಾಸನ ಮತ್ತು ಸಾಂವಿಧಾನಿಕ ಸಂಸ್ಥೆಯ ಮಹತ್ವವೇ ಗೊತ್ತಿಲ್ಲದಂತಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಸುದೀರ್ಘ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, “ಕೆಪಿಎಸ್‌ಸಿಯನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿ/ಸರ್ಕಾರದ ಹೇಳಿಕೆ ಕೇವಲ ಹತಾಶೆಯಿಂದಷ್ಟೇ ಕೂಡಿಲ್ಲ, ಅದು ಬುದ್ಧಿಗೇಡಿತನ, ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ. ಇವರ ವರಸೆ ಹೇಗಿದೆ ಎಂದರೆ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ಹಾಗೂ ‘ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ!'” ಎಂದು ಲೇವಡಿ ಮಾಡಿದ್ದಾರೆ.
“ಕೆಪಿಎಸ್‌ಸಿ ಎನ್ನುವ ಸಂಸ್ಥೆ ಅತ್ಯುತ್ತಮವಾಗಿದೆ, ಆದರೆ ಅಲ್ಲಿಗೆ ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು?, ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು?, ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು, ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ” ಎಂದು ಸಚಿವರು ತೀವ್ರ ಟಾಂಗ್ ನೀಡಿದ್ದಾರೆ.
“ಬೇಜವಾಬ್ದಾರಿಯಿಂದ ಚಪಲಕ್ಕೆ ನಾಲಿಗೆ ಜಾರುವ ಮೊದಲು ಕೆಪಿಎಸ್‌ಸಿ ಎಂದರೆ ಏನು?, ಅದರ ಸಂರಚನೆ, ಸ್ವರೂಪ ಹೇಗಿರುತ್ತದೆ?, ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು?, ಆ ಸಂಸ್ಥೆ ನಡೆದುಬಂದ ಹಾದಿ ಹಾಗೂ ಹೆಗ್ಗಳಿಕೆಯ ಬಗ್ಗೆ ತಿಳಿದುಕೊಳ್ಳಿ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕೇ ಹೊರತು, ಇಡೀ ಹೊಲಕ್ಕೇ ವಿಷವೂಡಿಸುವ ಕೆಲಸ ಆಗಬಾರದು” ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.



