ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕಾಡಾನೆಯ ದಂತ ನಾಪತ್ತೆಯಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಈ ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸಿ, ಅರಣ್ಯ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆ.
ಬಂಡೀಪುರದ ಮದ್ದೂರು ವಲಯದಲ್ಲಿ ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಮತ್ತೊಂದೆಡೆ, ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಮೃತಪಟ್ಟ ಕಾಡಾನೆಯ ದಂತ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲೇ ಇಂತಹ ಘಟನೆಗಳು ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳ್ಳಬೇಟೆಗಾರರು ಅರಣ್ಯ ಪ್ರದೇಶ ಪ್ರವೇಶಿಸಲು ಹೇಗೆ ಸಾಧ್ಯವಾಯಿತು? ಗಸ್ತು ವ್ಯವಸ್ಥೆಯಲ್ಲಿ ಲೋಪವಾಗಿದೆಯೇ? ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ:
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಅಥವಾ ಮೇಲ್ವಿಚಾರಣೆಯ ಕೊರತೆ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದಲ್ಲದೆ, ರಾಜ್ಯದ ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಬಂಡೀಪುರ ಸೇರಿದಂತೆ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಗಸ್ತು ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಂತೆಯೂ ಸೂಚಿಸಲಾಗಿದೆ.



