ಚಿಕ್ಕಮಗಳೂರು: ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ನಡೆಯುತ್ತಿದ್ದ ಅಂಬೇಡ್ಕರ್ ಜಯಂತಿ ಮೆರವಣಿಗೆಯ ಸಂಭ್ರಮ ದುರಂತಕ್ಕೆ ತಿರುಗಿದೆ.
ನಿಯಂತ್ರಣ ತಪ್ಪಿದ ಕಾರೊಂದು ಮೆರವಣಿಗೆಯಲ್ಲಿದ್ದ ಜನರ ಗುಂಪಿಗೆ ನುಗ್ಗಿ ಪಲ್ಟಿಯಾದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮಕ್ಕೆ ತನ್ನ ತಂಗಿ ಮನೆಗೆ ಬಂದಿದ್ದ ಸಾನ್ವಿ (7) ಎಂಬ ಬಾಲಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ಏಕಾಏಕಿ ಜನರ ಮೇಲೆ ಹರಿದು ಪಲ್ಟಿಯಾದ ಪರಿಣಾಮ ಭೀಕರ ದುರಂತ ಸಂಭವಿಸಿದೆ.
ಈ ಘಟನೆ ಹಾಸನದಲ್ಲಿ ಗಣಪತಿ ಮೆರವಣಿಗೆಯ ವೇಳೆ ನಡೆದಿದ್ದ ದುರಂತವನ್ನು ನೆನಪಿಸುವಂತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯ ನಂತರ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳು ಹಾಗೂ ಕಾರು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದ ಘಟನೆ ಕೂಡ ನಡೆದಿದೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ತೀವ್ರ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



