ತುಮಕೂರು: ಗಣಿಗಾರಿಕೆ ಪ್ರದೇಶದಲ್ಲಿ ರಸ್ತೆ ಕುಸಿದ ಪರಿಣಾಮ ಕ್ವಾರಿಯ ಆಳವಾದ ಗುಂಡಿಗೆ ಲಾರಿ ಉರುಳಿ ಚಾಲಕ ಹಾಗೂ ಕ್ಲೀನರ್ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಲಿ ಲಾರಿಯನ್ನು ಯೂಟರ್ನ್ ತೆಗೆದುಕೊಳ್ಳುವ ವೇಳೆ ಏಕಾಏಕಿ ರಸ್ತೆ ಕುಸಿದಿದೆ. ಪರಿಣಾಮ ನಿಯಂತ್ರಣ ತಪ್ಪಿದ ಲಾರಿ ಸುಮಾರು 50 ಮೀಟರ್ ಆಳದ ಕ್ವಾರಿ ಗುಂಡಿಗೆ ಬಿದ್ದಿದೆ. ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಲಾರಿಯಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಜಾರ್ಖಂಡ್ ಮೂಲದ ಅಕ್ಷಯ್ (30) ಹಾಗೂ ಮಧ್ಯಪ್ರದೇಶ ಮೂಲದ ಸಹದೇವ್ (25) ಎಂದು ಗುರುತಿಸಲಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಹುಲಿಯೂರುದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



