HomeKarnataka Newsಮಲೆನಾಡಿನಲ್ಲಿ ವರುಣನ ಅಬ್ಬರ; ಮನೆ ಹಿಂಭಾಗಕ್ಕೆ ಕುಸಿದ ಧರೆ, ಕುಟುಂಬ ಸ್ಥಳಾಂತರ!

ಮಲೆನಾಡಿನಲ್ಲಿ ವರುಣನ ಅಬ್ಬರ; ಮನೆ ಹಿಂಭಾಗಕ್ಕೆ ಕುಸಿದ ಧರೆ, ಕುಟುಂಬ ಸ್ಥಳಾಂತರ!

For Dai;y Updates Join Our whatsapp Group

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ ಮತ್ತೆ ಆರ್ಭಟ ಮುಂದುವರಿಸಿದೆ.

ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕುಗಳ ಹಲವು ಭಾಗಗಳಲ್ಲಿ ಬಿಟ್ಟು ಬಿಟ್ಟು ನಿರಂತರವಾಗಿ ಗಾಳಿ-ಮಳೆ ಸುರಿಯುತ್ತಿದ್ದು, ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಸೇರಿದಂತೆ ಹಲವು ಅವಾಂತರಗಳು ಸಂಭವಿಸುತ್ತಿವೆ.

ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪವನ್ ಎಂಬುವವರ ಮನೆಯ ಸಮೀಪದ ಧರೆ ಕುಸಿಯಲಾರಂಭಿಸಿದೆ. ಈಗಾಗಲೇ ಧರೆ ಕುಸಿದು ಮನೆಯ ಹಿಂಭಾಗದವರೆಗೆ ಮಣ್ಣು ಬಂದಿದೆ. ಮಳೆ ಇನ್ನಷ್ಟು ಹೆಚ್ಚಾದರೆ ಸುಮಾರು 100 ಅಡಿ ಎತ್ತರದ ಧರೆ ಕುಸಿದು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ. ಮನೆಯೊಳಗೂ ಮಣ್ಣು ಮಿಶ್ರಿತ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಯನ್ನು ಖಾಲಿ ಮಾಡಿದ್ದಾರೆ.

ಇನ್ನು ಮಲೆನಾಡು ಭಾಗದಲ್ಲಿ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದ್ದು, ಕಾರ್ಕಳ-ಮಂಗಳೂರು-ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮರಗಳ ಸಮೇತ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಬಿದ್ದಿದ್ದು, ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಆಗಾಗ ಜಾರುತ್ತಿರುವುದರಿಂದ ತೆರವು ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಳೆ ಹೆಚ್ಚಾದ ಸಂದರ್ಭದಲ್ಲಿ ಈ ಭಾಗದಲ್ಲಿ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಲೆನಾಡಿನಲ್ಲಿ ಮತ್ತೆ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img