ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆ, ಇದೀಗ ಚಿತ್ರದ ಟೈಟಲ್ ಕಾರ್ಡ್ ಕುರಿತ ಮಾಹಿತಿ ಹೊಸ ಸಂಚಲನ ಸೃಷ್ಟಿಸಿದೆ.
ಚಿತ್ರದ ಆರಂಭದಲ್ಲಿ ‘ಹಾನರೆಬಲ್ ಚೀಫ್ ಮಿನಿಸ್ಟರ್ ದಳಪತಿ ವಿಜಯ್’ ಎಂಬ ಟೈಟಲ್ ಕಾರ್ಡ್ ಪ್ರದರ್ಶಿಸಲು ಚಿತ್ರತಂಡ ಯೋಚಿಸಿತ್ತು ಎಂದು ವರದಿಯಾಗಿದೆ. ಆದರೆ, ಈ ಪ್ರಸ್ತಾಪವನ್ನು ವಿಜಯ್ ಸ್ವತಃ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳು ದಶಕಗಳಿಂದ ತಮ್ಮನ್ನು ಗುರುತಿಸುತ್ತಿರುವ ‘ದಳಪತಿ’ ಎಂಬ ಬಿರುದೇ ಮುಂದುವರಿಯಬೇಕು ಎಂದು ವಿಜಯ್ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ರಾಜಕೀಯ ಹುದ್ದೆಯನ್ನು ಸಿನಿಮಾದೊಂದಿಗೆ ಮಿಶ್ರಣಗೊಳಿಸಬಾರದು ಎಂಬ ನಿಲುವನ್ನು ಅವರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ತಮ್ಮ ಸಿನಿಮಾ ಬದುಕಿಗೆ ತೆರೆ ಎಳೆಯುತ್ತಿರುವ ಈ ಹಂತದಲ್ಲೂ ಅಭಿಮಾನಿಗಳ ಭಾವನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ವಿಜಯ್ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
‘ಜನ ನಾಯಗನ್’ ಸಿನಿಮಾ ಈಗಾಗಲೇ ಸೆನ್ಸಾರ್ ಸಮಸ್ಯೆಗಳು, ದೃಶ್ಯ ಸೋರಿಕೆ ಹಾಗೂ ಬಿಡುಗಡೆಯ ವಿಳಂಬದಿಂದ ಸಾಕಷ್ಟು ಸುದ್ದಿಯಲ್ಲಿದ್ದು, ಹೊಸ ರಿಲೀಸ್ ಡೇಟ್ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.



