HomeArt and Literatureಭಕ್ತರ ಕಷ್ಟ ಕಳೆಯುವ ಗ್ರಾಮದ ದೇವತೆಗಳು

ಭಕ್ತರ ಕಷ್ಟ ಕಳೆಯುವ ಗ್ರಾಮದ ದೇವತೆಗಳು

For Dai;y Updates Join Our whatsapp Group

Spread the love

ಮುಳಗುಂದ ಪಟ್ಟಣದ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ದುರ್ಗಮ್ಮಾ ದೇವತೆ ಭಕ್ತರ ಕಷ್ಟ ಕಾರ್ಪಣ್ಯ ಕಳೆಯುವ ದೇವತೆಯಾಗಿದ್ದಾರೆ. ಯಾವದೇ ರೋಗ-ರುಜಿನುಗಳಿಂದ ರಕ್ಷಿಸುವ, ಗ್ರಾಮದ ಜನರಿಗೆ ಆತಂಕಗಳಿಂದ ಕಾಪಾಡುವ ಶಕ್ತಿ ಹೊಂದಿದ ಗ್ರಾಮದೇವತೆಯರ ಮಹಿಮೆ ಅಪಾರ.

ಉತ್ತರ ಕರ್ನಾಟಕದಲ್ಲಿ ಅನಾದಿ ಕಾಲದಿಂದಲೂ ಪ್ರತಿ ಗ್ರಾಮಗಳಲ್ಲೂ ಗ್ರಾಮದೇವತೆಯ ದೇವಸ್ಥಾನವಿರುವದು ಪ್ರತೀತಿ. ಆದರೆ ವಿಶೇಷವಾಗಿ ರೈತರ ಮೊದಲ ಪೂಜೆ ದೇವಿಗೆ ಸಲ್ಲಿಸಿ ನಂತರ ಭೂಮಿಪೂಜೆ ನೆರವೇರಿಸಿ ತಮ್ಮ ಹೊಲಗಳಿಗೆ ಬಿತ್ತನೆ ಹಾಗೂ ರಾಶಿ ಮಾಡುವ ಕೆಲಸ ಮಾಡುತ್ತಾರೆ. ಇತರ ಶುಭ ಕಾರ್ಯಗಳಿಗೆ ದೇವಿಯರಿಗೆ ಉಡಿ ತುಂಬುವ ಕಾರ್ಯ ಮೊದಲು ನೆರವೇರಿಸಿ ನಂತರ ಯಾವದೇ ಕೆಲಸ ಕಾರ್ಯ ನೆರವೇರಿಸಲಾಗುವದು.

ಪಟ್ಟಣದ ಹಳೆಹುಡ ಓಣಿಯಲ್ಲಿ ನೆಲಸಿದ ಗ್ರಾಮ ದೇವತೆಗಳು 200 ವರ್ಷಗಳ ಇತಿಹಾಸ ಹೊಂದಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುವುದು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರ ಆರಾಧ್ಯ ದೇವಿಯಾಗಿ ಗ್ರಾಮದ ರಕ್ಷಣೆಯನ್ನು ಮಾಡುತ್ತಾ, ರೈತರ ಬೆಳೆಗಳಿಗೆ ರಕ್ಷಣೆ ನೀಡುವ ಈ ಗ್ರಾಮ ದೇವತೆ ಮುಳಗುಂದ ಪಟ್ಟಣದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಸೌಹಾರ್ದತೆಯಿಂದ ಜಾತಿ, ಮತ, ಭೇದವಿಲ್ಲದೆ ಸರ್ವ ಜನಾಂಗಕ್ಕೂ ಆದಿಶಕ್ತಿಯಾಗಿ ನೆಲೆಸಿ, ಎರಗಿ ಬಂದ ಕಷ್ಟಗಳಿಗೆ ಪರಿಹಾರ ಕಲ್ಪಿಸುವ ಶಕ್ತಿಯಾಗಿದ್ದಾಳೆ.

ವಿಜಯ ದಶಮಿಯ ಸಂದರ್ಭದಲ್ಲಿ 9 ದಿನಗಳ ಕಾಲ ಸತತ ವಿಷೇಶ ಪೂಜೆ, ಪಾರಾಯಣ, ಪ್ರವಚನಗಳ ಜೊತೆಯಲ್ಲಿ ಭಕ್ತರಿಗೆ ಹೋಳಿಗೆ ಪ್ರಸಾದ ಸೇವೆ ಜರುಗುತ್ತಿರುವುದು ವಿಶೇಷವಾಗಿದೆ. 200 ವರ್ಷಗಳ ಹಿಂದೆ ತಯಾರಾದ ದ್ಯಾಮವ್ವ ಹಾಗೂ ದುರ್ಗಮ್ಮನ ಮೂರ್ತಿ ಹೊಂದಿತ್ತು., ಪ್ರಸ್ತುತ ವರ್ಷ ನೂತನ ಮೂರ್ತಿಯನ್ನು ದಿ. ಆರ್.ಎನ್. ದೇಶಪಾಂಡೆ ಇವರ ಸ್ಮರಣಾರ್ಥ ಅವರ ಸುಪುತ್ರ, ಪ.ಪಂ ಸದಸ್ಯ ನಾಗರಾಜ ದೇಶಪಾಂಡೆ ಮಾಡಿಸಿದ್ದಾರೆ. ಈ 4 ದಿನಗಳ ಕಾಲ ದೇವಿಯು ಊರಿನ 5 ಕಟ್ಟೆ ಮನೆಗಳಿಗೆ (ಗ್ರಾಮದ ಪ್ರಮುಖರ) ಭೇಟಿ ನೀಡಿ ನಂತರ ಚೌತಮನೆಯ ಕಟ್ಟಗೆ ಆಗಮಿಸಿ ವಾಸ್ತವ್ಯ ಹೂಡುವ ಜೊತೆಗೆ ಭಕ್ತರ ಮನೆ ಮನೆಗೆ ತೆರಳಿ ಉಡಿ ತುಂಬುಸಿಕೊಳ್ಳುವ ಕಾರ್ಯ ಜರಗುವುದು. ಪ್ರತಿ ದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದೇವಿಯ ಮೂರ್ತಿ ಮೆರವಣಿಗೆ ನಡೆಯುವದು. ಕೊನೆಯ ದಿನ ರಾತ್ರಿಯಿಂದ ಬೆಳಿಗ್ಗೆವರೆಗೆ ದೇವಿಯ ವೈಭವದ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಜರುಗುವುದು.

ಈ ಗ್ರಾಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಪಟ್ಟಣದಲ್ಲಿ ಜನಿಸಿದ ಪ್ರತಿ ಹೆಣ್ಣು ಮಕ್ಕಳು ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸುವದರಿಂದ ತವರಿನ ಸಿರಿ ಹೆಚ್ಚಿಸುವುದರ ಜೊತೆಗೆ ಗಂಡನ ಮನೆಗೆ ಸಕಲ ಸಮೃದ್ಧಿ ಹೆಚ್ಚಾಗುವುದು ಎಂಭ ಬಲವಾದ ನಂಬಿಕೆ ಈ ಗ್ರಾಮ ದೇವಿಯ ಜಾತ್ರಾ ವಿಶೇಷತೆಯಾಗಿದೆ. 12 ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯಲ್ಲಿ ಜಾತಿ, ಮತ, ಬೇಧ ಭಾವವಿಲ್ಲದೇ ಎಲ್ಲಾ ಜನಾಂಗದವರು ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಈ ಜಾತ್ರಾ ಮಹೋತ್ಸವದಲ್ಲಿ ಮಾಂಸಾಹಾರ ಸೇವನೆ ನಿಷಿದ್ಧವಾಗಿದೆ.

– ಶ್ರೀಕಾಂತ ವೀ.ಸಿದ್ದನಗೌಡರ.

ಮುಳಗುಂದ ಪಟ್ಟಣದ ಹಳೆಹುಡದ ಗ್ರಾಮ ದೇವತೆಗಳಾದ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿ ಜಾತ್ರೆ ಅದ್ದೂರಿಯಿಂದ ಜರಗುಲಿದ್ದು, ನಾಡಿನ ಪ್ರಖ್ಯಾತ ಸಂಗೀತಗಾರರು, ಕಲಾವಿದ ಬಳಗ ಹಾಗೂ ಸಕಲ ವಾದ್ಯ ಮೇಳಗಳಿಂದ ಜಾತ್ರೆ ಜರುಗಲಿದೆ. ಸಕಲ ಸದ್ಭಕ್ತರು ಆಗಮಿಸಿ, ದೇವಿಯ ದರ್ಶನ, ಆಶೀರ್ವಾದ ಪಡೆಯಬೇಕು.

– ಶಿವಣ್ಣಾ ಎಂ.ನೀಲಗುಂದ.

ಜಾತ್ರಾ ಸಮಿತಿ ಗೌರವಾಧ್ಯಕ್ಷ

 

**ಕೋಟ್**

ಭಕ್ತರು ದೇವಿಗೆ ತಮ್ಮ ಕಷ್ಟಗಳ ಪರಿಹಾರ ಮಾಡುವಂತೆ ಹರಕೆ ಹೊತ್ತು ಉಡಿ ಕಟ್ಟಿದರೆ ಸಾಕು, ಬಂದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ. ಹೀಗಾಗಿ ಪ್ರತಿಯೊಂದು ಕುಟುಂಬದವರಿಗೂ ದ್ಯಾಮವ್ವ ಹಾಗೂ ದುರ್ಗಮ್ಮಾ ಮನೆ ದೇವಿಯಾಗಿದ್ದಾರೆ.

– ಷಣ್ಮುಖಪ್ಪ ಬಡ್ನಿ.

ಟ್ರಸ್ಟ್ ಕಮಿಟಿ ಅಧ್ಯಕ್ಷರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!