ಬೆಂಗಳೂರು: ದೀರ್ಘಕಾಲದ ಕಾನೂನು ಹೋರಾಟ ಮತ್ತು ರಾಜಕೀಯ ಬೆಳವಣಿಗೆಗಳ ನಡುವೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ವಿಧಾನಸಭೆ ಕಾರ್ಯದರ್ಶಿ ಶನಿವಾರ ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಈ ಕ್ರಮ ಜಾರಿಯಾಗಿದೆ.
ಭಾರತೀಯ ಸಂವಿಧಾನದ ವಿಧಿ 191(1)(e) ಹಾಗೂ ಜನಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 8ರ ಅನ್ವಯ ಈ ಅನರ್ಹತೆ ಆದೇಶ ಹೊರಡಿಸಲಾಗಿದೆ. ಈ ಕಾನೂನು ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಲ್ಪಟ್ಟರೆ ಅವರು ತಕ್ಷಣದಿಂದಲೇ ಶಾಸಕರಾಗಿ ಮುಂದುವರಿಯಲು ಅರ್ಹರಾಗುವುದಿಲ್ಲ.
ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದ ಬಳಿಕವೂ ಅನರ್ಹತೆ ಆದೇಶ ಹೊರಡಿಸಲು ವಿಧಾನಸಭೆ ಸಚಿವಾಲಯ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆಯಲು ಸರ್ಕಾರ ಉದ್ದೇಶಪೂರ್ವಕವಾಗಿ ಸಮಯಾವಕಾಶ ನೀಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು.
ಆದರೆ ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಅಧಿಕೃತ ಆದೇಶದೊಂದಿಗೆ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದುಗೊಂಡಿದೆ. ಈ ಬೆಳವಣಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ.



