HomeKarnataka Newsಯಡಿಯೂರು ಕೆರೆ ಭೂವಿವಾದ: ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್!

ಯಡಿಯೂರು ಕೆರೆ ಭೂವಿವಾದ: ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್!

For Dai;y Updates Join Our whatsapp Group

ನವದೆಹಲಿ: ಬೆಂಗಳೂರಿನ ಯಡಿಯೂರು ಕೆರೆ ಪ್ರದೇಶದ ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಭೂಮಿಯ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸಲು ಕಂದಾಯ ಅಧಿಕಾರಿಗಳಿಗೆ ನೀಡಿದ್ದ ಅನುಮತಿಯನ್ನು ಕಾನೂನುಬಾಹಿರ ಎಂದು ಹೇಳಿರುವ ಸುಪ್ರೀಂ ಕೋರ್ಟ್, 2014ರಲ್ಲಿ ನೀಡಲಾಗಿದ್ದ ಹೊಸ ತನಿಖೆಯ ನೋಟಿಸ್‌ನ್ನೂ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರ ಪೀಠ ಈ ತೀರ್ಪು ನೀಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 56ರ ಅಡಿಯಲ್ಲಿ ಮರುಪರಿಶೀಲನಾ ಅಧಿಕಾರವನ್ನು ಚಲಾಯಿಸಲು ಮೂರು ವರ್ಷಗಳ ಶಾಸನಬದ್ಧ ಕಾಲಮಿತಿ ಇದೆ. ಈ ಅವಧಿ ಮುಗಿದ ಬಳಿಕ ಅಧಿಕಾರಿಗಳು ಮರುಪರಿಶೀಲನಾ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

2014ರಲ್ಲಿ ಆರಂಭವಾಗಿದ್ದ ವಿವಾದ:

ಯಡಿಯೂರು ಕೆರೆ ಒತ್ತುವರಿಯಾಗಿರುವ ಕುರಿತು ಬಂದ ದೂರಿನ ಆಧಾರದ ಮೇಲೆ ಕಂದಾಯ ದಾಖಲೆಗಳ ಜಂಟಿ ನಿರ್ದೇಶಕರು ಹಾಗೂ ನೋಂದಣಾಧಿಕಾರಿಗಳು 2014ರಲ್ಲಿ ಭೂ ಕಂದಾಯ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ಹೊಸದಾಗಿ ತನಿಖೆ ನಡೆಸಲು ಭೂಮಾಲೀಕರಿಗೆ ನೋಟಿಸ್ ನೀಡಿದ್ದರು.

ಈ ನೋಟಿಸ್ ಪ್ರಶ್ನಿಸಿ ಭೂಮಾಲೀಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠವು, ಮೂರು ವರ್ಷಗಳ ಕಾಲಮಿತಿ ಮುಗಿದ ಬಳಿಕ ಅಧಿಕಾರಿಗಳು ಮರುಪರಿಶೀಲನಾ ಅಧಿಕಾರ ಬಳಸಲು ಸಾಧ್ಯವಿಲ್ಲ ಎಂದು ಹೇಳಿ ನೋಟಿಸ್ ರದ್ದುಗೊಳಿಸಿತ್ತು.

ಏಕಸದಸ್ಯ ಪೀಠದ ಆದೇಶ ಬದಲಿಸಿದ್ದ ವಿಭಾಗೀಯ ಪೀಠ:

ಆದರೆ, 2020ರ ಜನವರಿಯಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಬದಲಿಸಿತ್ತು. ಅಧಿಕಾರಿಗಳು ಈವರೆಗೆ ಯಾವುದೇ ಅಂತಿಮ ಆದೇಶ ಹೊರಡಿಸಿಲ್ಲ ಎಂಬ ಕಾರಣ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಿತ್ತು.

ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನೂ ಹೈಕೋರ್ಟ್ 2023ರ ಜೂನ್‌ನಲ್ಲಿ ವಜಾಗೊಳಿಸಿತ್ತು. ಬಳಿಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಮೂರು ವರ್ಷಗಳ ಕಾಲಮಿತಿ ಕಡ್ಡಾಯ ಎಂದ ಸುಪ್ರೀಂ:

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ಆದೇಶ ಅಥವಾ ದಾಖಲೆಗಳನ್ನು ಮರುಪರಿಶೀಲಿಸುವ ಅಧಿಕಾರವನ್ನು ಕಾಯ್ದೆಯಲ್ಲಿ ನಿಗದಿಪಡಿಸಿರುವ ಮೂರು ವರ್ಷಗಳ ಅವಧಿಯ ನಂತರ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಾನೂನಿನಲ್ಲಿ ನಿಗದಿಪಡಿಸಿರುವ ಕಾಲಮಿತಿಯನ್ನು ಮೀರಿ ಮರುಪರಿಶೀಲನಾ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕೆರೆ ಒತ್ತುವರಿ ತನಿಖೆಯ ನೆಪದಲ್ಲಿಯೂ ಶಾಸನಬದ್ಧ ಕಾಲಮಿತಿಯನ್ನು ಕಡೆಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಮೂಲಕ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, 2014ರಲ್ಲಿ ಭೂಮಾಲೀಕರಿಗೆ ನೀಡಲಾಗಿದ್ದ ಹೊಸ ತನಿಖೆಯ ನೋಟಿಸ್‌ನ್ನೂ ವಜಾಗೊಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img