ಚಂಡೀಗಢ: ಆನ್‌ಲೈನ್ ಗೇಮಿಂಗ್ ವ್ಯಸನ ಮತ್ತೊಂದು ದುರಂತಕ್ಕೆ ಕಾರಣವಾಗಿದ್ದು, ದೊಡ್ಡ ಮೊತ್ತದ ಹಣ ಕಳೆದುಕೊಂಡು ಮಾನಸಿಕ ಒತ್ತಡಕ್ಕೆ ಒಳಗಾದ ಮೂವರು ಸ್ನೇಹಿತರು ವಿಷ ಸೇವಿಸಿರುವ ಘಟನೆ ಪಂಜಾಬ್‌ನ ನವಾಂಶಹರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತರನ್ನು ಪರಮ್‌ಜೀತ್ ಸಿಂಗ್ ಖಾಲ್ಸಾ (13) ಮತ್ತು ದಿಲ್‌ಪ್ರೀತ್ ಸಿಂಗ್ (21) ಎಂದು ಗುರುತಿಸಲಾಗಿದೆ. ಮರಿಂದರ್ ಸಿಂಗ್ (15) ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಗಸ್ಟ್ 10ರಂದು ದಿಲ್‌ಪ್ರೀತ್ ಸಿಂಗ್ ತನ್ನ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ವಿಷ ಸೇವಿಸುವುದಾಗಿ ತಿಳಿಸಿದ್ದ. ಕೂಡಲೇ ಇಬ್ಬರೂ ಸ್ಥಳಕ್ಕೆ ತೆರಳಿದ್ದು, ಬಳಿಕ ಮೂವರು ಸೇರಿ ವಿಷಪೂರಿತ ಆಹಾರ ಸೇವಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪರಮ್‌ಜೀತ್ ಸಿಂಗ್ ಮೃತಪಟ್ಟರೆ, ಮರುದಿನ ಆಗಸ್ಟ್ 11ರಂದು ದಿಲ್‌ಪ್ರೀತ್ ಸಿಂಗ್ ಕೂಡ ಸಾವನ್ನಪ್ಪಿದ್ದಾನೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಆಪ್ತ ಸ್ನೇಹಿತರಾಗಿದ್ದರು. ಇವರಲ್ಲಿ ಒಬ್ಬ ಆನ್‌ಲೈನ್ ಗೇಮ್‌ಗಳಲ್ಲಿ ದೊಡ್ಡ ಪ್ರಮಾಣದ ಹಣ ಕಳೆದುಕೊಂಡಿದ್ದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಇದೇ ವೇಳೆ ಕುಟುಂಬದ ಒತ್ತಡವೂ ಹೆಚ್ಚಾಗಿದ್ದ ಕಾರಣ ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಯಾವುದೇ ದೂರು ದಾಖಲಿಸದಿದ್ದರೂ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



