ಅಜ್ಜನ ತೋಟದಲ್ಲಿ ಜೇನು ಜಾತ್ರೆ! ಜೇನು ಸಾಕಣೆಯತ್ತ, ರೈತರ ಚಿತ್ತ

0
Spread the love

ಜೇನು ಬಿಡಿಸಿ ಸಂಕ್ರಾಂತಿ ಆಚರಣೆ

Advertisement

ವರ್ಷಕ್ಕೆ ಜಿಲ್ಲೆಯಿಂದ ಸಂಗ್ರಹವಾಗ್ತಿದೆ ಸುಮಾರು ಕ್ವಿಂಟಲ್ ಜೇನು

ಬಸವರಾಜ ಕರುಗಲ್
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪುಟ್ಟ ಮಕ್ಕಳ ಕೈಯಲ್ಲಿ ಜೇನು, ಮಂದಹಾಸ ಬೀರುತ್ತಿರುವ ಮಕ್ಕಳು ಜೊತೆಗೆ ಖುಷಿ ಪಡುತ್ತಿರುವ ಪಾಲಕರು, ಜೇನು ಸಾಕಾಣಿಕೆದಾರರು ಗುರುವಾರ ಶ್ರೀ ಗವಿಸಿದ್ಧೇಶ್ವರ ಮಠದ ತೋಟದಲ್ಲಿ ಕಂಡು ಬಂದರು.

ಮಕ್ಕಳು ಕೈಯಲ್ಲಿ ಜೇನು ಪೆಟ್ಟಿಗೆ ಹಿಡಿದಿರುವುದನ್ನು ಕಂಡು ಅಚ್ಚರಿಯಾಯಿತು. ಸಾಕಿರುವ ಜೇನು ಯಾರಿಗೂ, ಏನು ಮಾಡಲ್ಲ ಎಂದು ಜೇನು ಸಾಕಾಣಿಕೆ ಮಾಡುವವರು ತಿಳಿಸಿದರು.

ಕೋವಿಡ್ 19 ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ಗವಿಮಠ ಜಾತ್ರೆ ಅದ್ದೂರಿಯಾಗಿ ನಡೆಯೋದು ಅನುಮಾನವೇ. ಆದ್ರೆ, ಜಾತ್ರೆಗೂ ಮೊದಲೇ ಶ್ರೀಮಠದ ಕೈ ತೋಟದಲ್ಲಿ ಸಂಕ್ರಾಂತಿ ಪ್ರಯುಕ್ತ ಜೇನು ಜಾತ್ರೆ ನಡೆಯಿತು.

ಸಂಕ್ರಾಂತಿ ಹಿನ್ನೆಲೆಯಲ್ಲಿ ಶ್ರೀಮಠದ ಕೈ ತೋಟದಲ್ಲಿನ ಜೇನು ಪೆಟ್ಟಿಗೆಯಿಂದ ಜೇನು ಬಿಡಿಸುವ ಕಾರ್ಯಕ್ರಮ ನಡೆಯಿತು. ‌ತೋಟದಲ್ಲಿನ 14 ಜೇನು ಪೆಟ್ಟಿಗೆಯಿಂದ ಸುಮಾರು 25 ಕೆಜಿ ಜೇನು ಸಂಗ್ರಹಿಸಲಾಯಿತು. ಹೆಚ್ಚು ಬಿಸಿಲಿರುವ ಹೈದ್ರಾಬಾದ್- ಕರ್ನಾಟಕ ಭಾಗದಲ್ಲೂ ಜೇನು ಕೃಷಿಗೆ ಹೆಚ್ಚು ಅವಕಾಶ ಇವೆ ಎಂಬುದನ್ನು ಈ ಭಾಗದ‌ ರೈತರಿಗೆ ತೋರಿಸಿ ಕೊಡುವ ಉದ್ದೇಶದಿಂದ ಶ್ರೀಮಠ ಜೇನು ಸಾಕಣೆಗೆ ಮುಂದಾಗಿದೆ.

ಹೆಚ್ಚು ಬಿಸಿಲು ದಾಖಲಾಗುವ ಕೊಪ್ಪಳ ಜಿಲ್ಲೆಯಲ್ಲಿಯೂ ಸದ್ಯ 80ಕ್ಕೂ ಹೆಚ್ಚು ರೈತರು ಜೇನು ಕೃಷಿ ಮಾಡುತ್ತಿದ್ದಾರೆ. ಈ ಪೈಕಿ ಸುಮಾರು 40 ಕೃಷಿಕರು‌ ಜೇನು ಬಿಡಿಸಿ, ಮಾರಾಟ ಮಾಡುತ್ತಿರೋದು ವಿಶೇಷ.‌ ಒಬ್ಬ ರೈತ ಪ್ರತಿ‌ ವರ್ಷಕ್ಕೆ ಒಂದು ಪೆಟ್ಟಿಗೆಯಿಂದ ಕನಿಷ್ಠ 5 ರಿಂದ 8 ಕೆಜಿ ಜೇನು ಬಿಡಿಸುತ್ತಿದ್ದಾರೆ. ಎಂದರೆ ಪ್ರತಿ ವರ್ಷ ಕೊಪ್ಪಳ ಜಿಲ್ಲೆಯಿಂದ 1 ಕ್ವಿಂಟಾಲ್ ಗೂ ಹೆಚ್ಚು ಜೇನು ಸಂಗ್ರಹ ಆಗ್ತಿದೆ. ಇನ್ನು ಜೇನು ಸಾಕಣೆಯಿಂದ ಪರಾಗ ಸ್ಪರ್ಶ ಹೆಚ್ಚಾಗಿ ರೈತರು ತಮ್ಮ ಬೆಳೆಯ ಇಳುವರಿ ಹೆಚ್ಚಿಸಬಹುದು. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ರೈತರು ಜೇನು ಕೃಷಿ ಕಡೆಗೆ ಬರುವಂತೆ ಪ್ರೇರಣೆ‌ ನೀಡಲು ಶ್ರೀಮಠದ ಕೈ ತೋಟದಲ್ಲೇ ಜೇನು ಸಾಕಣೆ ಮಾಡಿದ್ದಾರೆ.

ಕಳೆದ‌ 3 ತಿಂಗಳಿನಿಂದ ಗವಿಮಠದ‌ಲ್ಲಿ ಜೇನು ಸಾಕಣೆ‌ ಆರಂಭಿಸಲಾಗಿದೆ. ಇಂದು ಸಂಕ್ರಾಂತಿ ಹಿನ್ನೆಲೆ ಮೊದಲ ಬಾರಿಗೆ ಜೇನು ಬಿಡಿಸಿದ್ದು, ಗವಿಮಠ ಜಾತ್ರೆಗೂ ಮೊದಲೇ ಜೇನು ಜಾತ್ರೆ ನಡೆಯಿತು ಎನ್ನಬಹುದು.

ಕೊಪ್ಪಳ ಜಿಲ್ಲೆಯ ವಾತಾವರಣ ಜೇನು ಸಾಕಾಣಿಕೆಗೆ ಹೇಳಿ ಮಾಡಿಸಿದಂತಿದೆ. ಅಂತೆಯೇ ಗವಿಮಠದ ಶ್ರೀಗಳು ಜೇನು ಸಾಕಾಣಿಕೆದಾರರಿಗೆ ಪ್ರೇರಣೆ ನೀಡಲು ಮಠದ ತೋಟದಲ್ಲೇ ಜೇನು ಕೃಷಿ ಆರಂಭಿಸುವ ಮೂಲಕ ಸ್ಫೂರ್ತಿ ತುಂಬಿದ್ದಾರೆ. ಮೂರು ತಿಂಗಳ ಹಿಂದೆ ಇಟ್ಟ ಜೇನು ಪೆಟ್ಟಿಗೆಯಿಂದ ಸುಮಾರು 25 ಕೆಜಿಯಷ್ಟು ಜೇನು ಬಿಡಿಸಲಾಯಿತು.
-ಬದ್ರಿಪ್ರಸಾದ, ಕೃಷಿ ವಿಜ್ಞಾನಿ, ಕೆವಿಕೆ, ಕೊಪ್ಪಳ.

ಸಂಕ್ರಾಂತಿ ಪ್ರಯುಕ್ತ ಗುರುವಾರ ಜೇನು ಬಿಡಿಸಲು ಪೂಜ್ಯರು ಅಪ್ಪಣೆ ನೀಡಿದ್ದರಿಂದ ಮಠದ ತೋಟದಲ್ಲಿ ಜೇನು ಬಿಡಿಸುವ ಕಾರ್ಯ ನಡೆಯಿತು. ಒಂದರ್ಥದಲ್ಲಿ ಇದು ಅಜ್ಜನ ಜಾತ್ರೆಗೂ ಮುನ್ನ ನಡೆದ ಜೇನು ಜಾತ್ರೆ ಎಂಬಂತಿತ್ತು.
-ನಿಂಗಪ್ಪ, ಜೇನು ಕೃಷಿಕ.


Spread the love

LEAVE A REPLY

Please enter your comment!
Please enter your name here