ವಿಜಯಸಾಕ್ಷಿ ಸುದ್ದಿ, ಗದಗ
ಲಾರಿ ಚಾಲಕರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿ, ಹಣ ವಸೂಲಿ ಮಾಡಿರುವ ಘಟನೆ ಜಿಲ್ಲೆಯ ಗದಗ ತಾಲ್ಲೂಕಿನ ಹುಲಕೋಟಿ, ಸಂಭಾಪುರ ಕ್ರಾಸ್ ಹಾಗೂ ಲಕ್ಕುಂಡಿ ಗ್ರಾಮಗಳಲ್ಲಿ ನಡೆದಿವೆ.
ಒಂದೇ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮೂರು ಕಡೆಗಳಲ್ಲಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.
ಹುಲಕೋಟಿಯಲ್ಲಿ ಲಾರಿ ಸೈಡಿಗೆ ಹಾಕಿ ವಿಶ್ರಾಂತಿ ಪಡೆಯುತ್ತಿದ್ದ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮದ ವಿಜಯಕುಮಾರ್ ಎಂಬ
ಮೈನ್ಸ್ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ವಿಜಯಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ.
ಸಂಭಾಪುರ ಕ್ರಾಸ್ ಬಳಿಯೂ ಲಾರಿ ಮೇಲೆ ದಾಳಿ ನಡೆಸಿ ಲಾರಿಯ ಗಾಜು ಒಡೆದಿದ್ದಲ್ಲದೇ, ಚಾಲಕ ಜೀವನಸಾಬ್ ಬೂದಿಹಾಳ ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ.
ಇನ್ನು ಅದೇ ಮೂವರು ದುಷ್ಕರ್ಮಿಗಳ ಗ್ಯಾಂಗ್ ಲಕ್ಕುಂಡಿಯ ಬಸ್ ನಿಲ್ದಾಣದ ಹತ್ತಿರವೂ ಲಾರಿಯ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಕಿರುಚಿಕೊಂಡಿದ್ದಾನೆ. ಆಗ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.
ಗಾಯಗೊಂಡಿರುವ ಚಾಲಕರಾದ ವಿಜಯಕುಮಾರ್ ಹಾಗೂ ಜೀವನಸಾಬ್ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಒಂದೇ ರಾತ್ರಿ ನಡೆದ ಈ ದಾಳಿಯಿಂದಾಗಿ ಲಾರಿ ಚಾಲಕರನ್ನು ಭಯಬೀತರನ್ನಾಗಿಸಿದೆ.