ಕಾನೂನು ಕುರಿತು ಅರಿವು ಮೂಡಿಸುವುದು ಅಗತ್ಯ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಗು ಭ್ರೂಣದಲ್ಲಿ ಇರುವಾಗ ಜಾರಿಯಾಗುವ ಕಾನೂನು, ಮರಣದವರೆಗೆ ಅನ್ವಯವಾಗಿರುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ ಪಾಟೀಲ ಅವರು ನುಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ, ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರೋಟರಿ ಗದಗ ಸೆಂಟ್ರಲ್ ಇವರ ಸಹಯೋದಲ್ಲಿ ಜರುಗಿದ ಅರೆ ಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಕುರಿತು ಅರಿವು ಮೂಡಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗಾಗಿ ಜಾರಿಯಲ್ಲಿರುವ ಯೋಜನೆ ಹಾಗೂ ಕಾನೂನುಗಳ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅರೆ ಕಾಲಿಕ ಸ್ವಯಂ ಸೇವಕರಾಗಿ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳು ವಿವಿಧ ಕಾನೂನುಗಳ ಕುರಿತು ಮಾಹಿತಿ ಪಡೆದು ಆರ್ಥಿಕವಾಗಿ ದುರ್ಬಲ ಹಾಗೂ ಶೋಷಿತರಿಗೆ ಇವುಗಳ ಅರಿವು ಮೂಡಿಸುವದರ ಜೊತೆಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಮುಂದಾಗುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಾರ್ವಜನಿಕರಲ್ಲಿ ಕಾನೂನಿನ ನೆರವು ಅರಿವು ಕುರಿತು ಜಾಗೃತಿ ಮೂಡಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾನೂನುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅರೆ ಕಾಲಿಕ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು ಆಯ್ಕೆಯಾದ ಸ್ವಯಂ ಸೇವಕರು ಈ ತರಬೇತಿಯ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವಂತೆ ತಿಳಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರಶಿಂಸಾ ಎಂ.ವಿ., ಜಿ.ಪಂ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ರೋಟರಿ ಗದಗ ಸೆಂಟ್ರಲ್ ಅದ್ಯಕ್ಷ ರಾಜು ಕಂಟಿಗೊಣ್ಣವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿಗಳಾದ ಜೆ.ಸಿ.ರಶ್ಮಿ, ಕು.ಸಾವಿತ್ರಿ ಕಬಾಡಿ ವಿವಿಧ ಕಾನೂನುಗಳ ಕುರಿತು ಅರೆ ಕಾಲಿಕ ಸ್ವಯಂ ಸೇವಕರಿಗೆ ಉಪನ್ಯಾಸ ನೀಡಿದರು. ಶ್ರೀಮತಿ ಉಷಾ ನಾಲ್ವಾಡ ಪ್ರಾರ್ಥಿಸಿದರು. ಕು. ಪ್ರಭಾವತಿ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.

Advertisement

Spread the love

LEAVE A REPLY

Please enter your comment!
Please enter your name here