ಕಾಲಮಿತಿಯೊಳಗೆ ತೆರಿಗೆ ವಸೂಲಿ ಮಾಡಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಸದೃಢವಾಗಲು ಸಾರ್ವಜನಿಕರಿಂದ ಸಕಾಲಕ್ಕೆ ತೆರಿಗೆ ವಸೂಲಿ ಮಾಡಬೇಕು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ತಹಸೀಲ್ದಾರರೊಡನೆ ಹಾನಿಗೊಳಗಾದ ಮನೆಗಳ ಜಂಟಿ ಸಮೀಕ್ಷೆ ಜರುಗಿಸಿ ಸಂತ್ರಸ್ತರಿಗೆ ನೆರವು ನೀಡಲು ಅಗತ್ಯದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ತೆರಿಗೆಗಳನ್ನು ಗುರಿ ನಿಗದಿಪಡಿಸಿಕೊಂಡು ಕಾಲಮಿತಿಯೊಳಗೆ ವಸೂಲಿ ಮಾಡಲು ಕಾರ್ಯೋನ್ಮುಖರಾಗಬೇಕು. ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಈಗಾಗಲೇ ಸಾರ್ವಜನಿಕರು ತೆರಿಗೆಗಳನ್ನು ಭರಿಸುತ್ತಿದ್ದು, ನ್ಯಾಯಯುತವಾಗಿ ತೆರಿಗೆಗೊಳಪಡುವ ವಿವಿಧ ರೀತಿಯ ಕಟ್ಟಡಗಳ ಅನುಗುಣವಾಗಿ ವ್ಯತ್ಯಾಸವಾಗಿ ಭರಿಸುತ್ತಿರುವ ತೆರಿಗೆಯನ್ನು ಗುರುತಿಸಲು ಸ್ಥಳೀಯ ಸಂಸ್ಥೆಗಳವಾರು, ವಾರ್ಡ್‌ವಾರು ಸಮೀಕ್ಷೆ ಕೈಗೊಳ್ಳಬೇಕು. ತೆರಿಗೆ ವಂಚನೆಯಾಗದಂತೆ ನಿಗಾವಹಿಸಬೇಕು ಎಂದು ಸ್ಥಳೀಯ ಸಂಸ್ಥೆ ಮುಖ್ಯಸ್ಥರಿಗೆ ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳು ನಗರದ ಸ್ವಚ್ಛತೆಗೆ ಶ್ರಮಿಸುತ್ತಿದ್ದು, ಹಸಿ ಕಸ ಒಣ ಕಸ ವಿಂಗಡಣೆಯಲ್ಲಿ ಶೇ.100% ರಷ್ಟು ಗುರಿ ಸಾಧಿಸಬೇಕು. ದಿನನಿತ್ಯ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ಸ್ವಚ್ಚತೆ, ಬಿದಿ ದೀಪ ನಿರ್ವಹಣೆ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನಿರ್ವಹಿಸಲು ಸೂಚಿಸಿದರು.
ಪೌರಕಾರ್ಮಿಕರ ಆರೋಗ್ಯದ ಬಗ್ಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಿದ ಅವರು ಕೊವಿಡ್-19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿವಾರ ಮಾಸ್ಕ, ಸುರಕ್ಷಾ ಪರಿಕರಗಳನ್ನು ಪೂರೈಸಲು ಹಾಗೂ ಕೊವಿಡ್ ಪ್ರದೇಶಗಳಲ್ಲಿ ತಾಜ್ಯ ನಿರ್ವಹಣೆಯಲ್ಲಿರುವ ಸಿಬ್ಬಂದಿಗಳು ಸುರಕ್ಷಾ ಪರಿಕರಗಳನ್ನು ಬಳಸಿ ನಿರ್ವಹಿಸಬೇಕು. ಆತ್ಮ ನಿರ್ಭರ ಭಾರತ ಯೋಜನೆಯಡಿ ಸರ್ಕಾರದಿಂದ ನೀಡಿದ ನಿರ್ದೇಶನಗಳನ್ವಯ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ರುದ್ರೇಶ ಎಸ್.ಎನ್. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾದವ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Spread the love

LEAVE A REPLY

Please enter your comment!
Please enter your name here