ವಿಜಯಸಾಕ್ಷಿ ಸುದ್ದಿ, ಮುಂಬಯಿ
ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳುತ್ತಿದೆ. ಈ ಐದು ರಾಜ್ಯಗಳ ಪೈಕಿ ಬಹುತೇಕರ ಕಣ್ಣು ಪಶ್ಚಿಮ ಬಂಗಾಳದ ಮೇಲಿತ್ತು. ಏಕೆಂದರೆ, ಅಲ್ಲಿ ದೀದಿ ಹಾಗೂ ಪ್ರಧಾನಿ ಮೋದಿ ನಡುವಿನ ಯುದ್ಧ ಎಂಬಂತೆ ಚುನಾವಣೆ ಭಾಸವಾಗಿತ್ತು. ಸದ್ಯ ಅಲ್ಲಿ ದೀದಿ ಗೆದ್ದು ಬೀಗಿದ್ದಾರೆ.
ಹೀಗಾಗಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಹ್ಯಾಟ್ರಿಕ್ ಗೆಲುವಿನತ್ತ ದಾಪುಗಾಲು ಹಾಕಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಮಮತಾ ಬ್ಯಾನರ್ಜಿಗೆ ಅಭಿನಂದನೆಗಳು ಹರಿದು ಬರುತ್ತಿವೆ.
ಇತ್ತೀಚಿನ ಮಾಹಿತಿಯಂತೆ 206 ಕ್ಷೇತ್ರಗಳಲ್ಲಿ ಟಿಎಂಸಿ, 83 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಮೂಲಕ ಟಿಎಂಸಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಅಭಿನಂದಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಶಿವಸೇನಾ ಮುಖಂಡ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಬಂಗಾಳದ ಹೆಣ್ಣು ಹುಲಿಗೆ ಅಭಿನಂದನೆಗಳು, ಓ ದೀದಿ..ದೀ..ಓ ದೀದಿ ಎಂದು ಹೊಗಳಿರುವ ಸಂಜಯ್ ರಾವತ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಟ್ವೀಟ್ ಮಾಡಿದ್ದಾರೆ.