ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತುರು ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರ ಪ್ರತಿಕೃತಿ ದಹಿಸಲು ಯತ್ನಿಸಿದರು. ಪ್ರತಿಕೃತಿ ದಹಿಸದಂತೆ ಪೊಲೀಸರು ತಡೆಯಲು ಯತ್ನಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ನೂಕು ನುಗ್ಗಲು ನಡೆಯಿತು.
ಕೈಯಲ್ಲಿದ್ದ ಪ್ರತಿಕೃತಿ ಕಸಿಯಲು ಯತ್ನಿಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತರು ಪರದಾಡಿದರು. ಕೆಲ ಹೊತ್ತು ಟಿಪ್ಪು ಸುಲ್ತಾನ್ ವೃತ್ತದಲ್ಲಿ ಹೈಡ್ರಾಮಾ ನಡೆಯಿತು. ಎಷ್ಟೇ ಪ್ರಯತ್ನಸಿದರು ಹಿಡಿದ ಹಠ ಬಿಡದ ಕರವೇ ಕಾರ್ಯಕರ್ತರು ಯತ್ನಾಳ ಅವರ ಪ್ರತಿಕೃತಿ ದಹಿಸಿದರು. ನಂತರ ಪೊಲೀಸರು ನೀರು ಸುರಿದು ಬೆಂಕಿ ನಂದಿಸಿದರು.
ಪ್ರತಿಕೃತಿ ದಹಿಸಲು ಪೆಟ್ರೋಲ್ ಸುರಿದ ಕಾರ್ಯಕರ್ತರು ಬೆಂಕಿ ಹಚ್ಚಿದರು. ಈ ವೇಳೆ ಒಮ್ಮೆಲೆ ಹೊತ್ತಿಕೊಂಡ ಬೆಂಕಿ ಆಳೆತ್ತರಕ್ಕೆ ದಗ್ಗಂತೆ ಉರಿಯಿತು. ಪಕ್ಕದಲ್ಲೇ ಇದ್ದ ಕಾರ್ಯಕರ್ತರು ದಢೀರ್ ಅಂತಾ ಹಿಂದೆ ಸರಿದಿದ್ದರಿಂದಾಗಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ. ಇದರಿಂದ ಕೊದಲೆಳೆ ಅಂತರದಲ್ಲಿ ಕರವೇ ಕಾರ್ಯಕರ್ತರು ಪಾರಾಗಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಿಂಗನಗೌಡ ಮಾಲೀಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಕರವೇ ಮುಖಂಡರಾದ ಹನುಮಂತ ಪೂಜಾರ, ಬಸವರಾಜ ಮೇಟಿ, ವಿರುಪಾಕ್ಷಿ ಹಿತ್ತಲಮನಿ, ಆಶು ಜೂಲಗುಡ್ಡ, ನಾಗಪ್ಪ ಅಣ್ಣಿಗೇರಿ, ಮಹಾದೇವಿ ದೊಡ್ಡಗೌಡರ ಸೇರಿದಂತೆ ಅನೇಕರು ಇದ್ದರು.