ತಾಯಿಗಾಗಿ ದೇವಾಲಯವನ್ನೇ ನಿರ್ಮಿಸಿದ ಶಾಸಕ!

0
Spread the love

ವಿಜಯಸಾಕ್ಷಿ ಸುದ್ದಿ, ಯಾದಗಿರಿ

Advertisement

ಇಂದು ವಿಶ್ವ ತಾಯಂದಿರ ದಿನ. ತಾಯಿಯನ್ನೇ ದೇವರು ಎಂದು ಪ್ರೀತಿಸುವ ಜನರ ಮಧ್ಯೆ, ತಾಯಿ – ತಂದೆಯನ್ನು ಬೀದಿಗೆ ಎಸೆಯುವ ಮಕ್ಕಳೂ ಸಮಾಜದಲ್ಲಿ ಹೆಚ್ಚಿದ್ದಾರೆ. ಇವರೆಲ್ಲರಿಗೂ ಮಾದರಿ ಎಂಬಂತೆ ಸದ್ಯ ಇಲ್ಲೊಬ್ಬ ಮಹಾನುಭಾವ ತಾಯಿಗೆ ದೇವಾಲಯವನ್ನೇ ಕಟ್ಟಿಸಿದ್ದಾರೆ. ಅದೂ ಶಾಸಕ ಎಂಬುವುದು ಇನ್ನು ವಿಶೇಷ.

ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜೂಗೌಡ ಅವರ ತಾಯಿಯ ಮೇಲಿನ ಪ್ರೀತಿ ಎಲ್ಲರ ಕಣ್ಣಾಲೆ ಒದ್ದೆ ಮಾಡಿಸುವುದರಲ್ಲಿ ಸಂಶಯವೇ ಇಲ್ಲ. ತಾಯಿ ಬದುಕಿದ್ದಾಗ ತೋರಿಸಿದ ಪ್ರೀತಿಯನ್ನೇ ಇಂದಿಗೂ ಉಳಿಸಿಕೊಂಡಿದ್ದಾರೆ. ರಾಜೂಗೌಡರು ತಮ್ಮ ತಾಯಿ ತಿಮ್ಮಮ್ಮ ಅವರ ನೆನಪಿಗಾಗಿ ಸ್ವಂತ ಗ್ರಾಮದಲ್ಲಿ ದೇವಾಲಯವನ್ನೇ ನಿರ್ಮಿಸಿದ್ದಾರೆ.
ಅವರ ಸ್ವಗ್ರಾಮ ಕೊಡೆಕಲ್ ನಲ್ಲಿರುವ ಜಮೀನಿನಲ್ಲಿ ತಾಯಿಯ ದೇವಸ್ಥಾನ ನಿರ್ಮಿಸಿದ್ದಾರೆ. ಅಲ್ಲದೇ ಅವರ ತಾಯಿ ಪ್ರೀತಿಯಿಂದ ಸಾಕಿದ್ದ ಗೋವುಗಳಿಗಾಗಿ ಗೋಶಾಲೆ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಅವರ ತಾಯಿ ನಡೆದಾಡುವ ಈ ಸ್ಥಳ ಇಂದು ಶಾಂತಿಧಾಮವಾಗಿದೆ. ಇದರೊಂದಿಗೆ ತಾಯಿಯ ಸಮಾಧಿಯ ಹತ್ತಿರವೇ ಶಾಸಕರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ರಾಜೂಗೌಡ ಅವರು ಶಾಸಕರಾಗಲು ಅವರ ತಾಯಿ ತಿಮ್ಮಮ್ಮ ಮತ್ತು ಅವರ ತಂದೆ ಶಂಭುನಗೌಡ ಅವರ ಶ್ರಮ ಸಾಕಷ್ಟಿದೆ. ರಾಜೂಗೌಡ ಸುರಪುರಕ್ಕೆ ಮಾತ್ರ ಶಾಸಕರು. ಆದರೆ, ಸುರಪುರ ಕ್ಷೇತ್ರದ ಜನತೆಗೆ ತಿಮ್ಮಮ್ಮನವರೇ ಶಾಸಕಿ. ಕ್ಷೇತ್ರದ ಬಡವರ ಕಷ್ಟಕ್ಕೆ ತಿಮ್ಮಮ್ಮನವರು ಆಸರೆಯಾಗಿದ್ದರು. ಕಷ್ಟ ಹೇಳಿಕೊಂಡು ಮನೆಗೆ ಬಂದವರನ್ನು ಅವರು ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ಕೈಯಾರೇ ಊಟ ಬಡಿಸಿ ಅವರ ಕಷ್ಟ ಆಲಿಸಿ, ಸಹಾಯ ಮಾಡಿ ಕಳುಹಿಸಿದ್ದಾರೆ. ಅಲ್ಲದೆ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಬಬ್ಲುಗೌಡ ದೊಡ್ಡವರಾಗಿ ಬೆಳೆದಿದ್ದರೂ ಪ್ರತಿ ದಿನ ತಾಯಿಯ ಕೈ ತುತ್ತು ತಿನ್ನುತ್ತಿದ್ದರು.

ವಯೋಸಹಜ ಖಾಯಿಲೆಯಿಂದ ಶಾಸಕರ ತಾಯಿ ಹಿಂದಿನ ವರ್ಷ ನಿಧನರಾಗಿದ್ದಾರೆ. ತಾಯಿಯ ಪ್ರೀತಿ ಸದಾ ನಮ್ಮೊಂದಿಗೆ ಇರಲಿ ಎಂದು ಭಾವಿಸಿದ್ದ ಶಾಸಕರು ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತರಿಸಿ ಆಂಧ್ರದ ಶಿಲ್ಪಿಗಳಿಂದ ತಾಯಿಯ ಮೂರ್ತಿ ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ.

ಪ್ರತಿದಿನ ಶಾಸಕರೇ ತಾಯಿಯ ಮೂರ್ತಿಯನ್ನು ಶುದ್ಧಗೊಳಿಸಿ, ಪೂಜೆ ಸಲ್ಲಿಸುತ್ತಾರೆ. ಸದ್ಯ ರಾಜುಗೌಡರಂತೆ ಅವರ ಮಗ ಕೂಡ ಇದೇ ಕಾರ್ಯ ಮುಂದುವರೆಸಿದ್ದಾರೆ. ಅಜ್ಜಿಯ ಸೇವೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ತಂದೆ – ತಾಯಿ ದುಡ್ಡಿನಲ್ಲಿ ಶೋಕಿ ಮಾಡಿ, ಅವರನ್ನು ಕೊನೆಗಾಲದಲ್ಲಿ ಕೈ ಬಿಡುವ ಮಕ್ಕಳ ಮುಂದೆ ಶಾಸಕರ ಈ ಪ್ರೀತಿ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತದೆ.


Spread the love

LEAVE A REPLY

Please enter your comment!
Please enter your name here