ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು; ಬಾಲಿವುಡ್ನಲ್ಲಿ ಅಪಾರ ಅವಕಾಶ, ಸಂಭಾವನೆ ಇರುವ, ದೇಶದ ಬಹುಪಾಲು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಬಹಮುಖ ಪ್ರತಿಭೆ, ಕನ್ನಡಿಗ ಪ್ರಕಾಶ ರೈ, ‘ನಂಗೆ ಹಿಂದಿ ಬರಲ್ಲ’ ಎಂಬ ಕನ್ನಡ ಟೀ ಶರ್ಟ್ ಹಾಕುವ ಮೂಲಕ ಹಿಂದಿ ಹೇರಿಕೆ ವಿರೋಧಿಸಿದ್ದಾರೆ.
ಅಮೆರಿಕದಲ್ಲೇ ವಿದ್ಯಾಭ್ಯಾಸ ಮಾಡಿ ಬಂದ ನಟ ಚೇತನ್ ಕೂಡ ಇಂತಹ ಪ್ರತಿಭಟನೆಯನ್ನೇ ಮಾಡಿದ್ದಾರೆ. ಇದರರ್ಥ ಪ್ರಕಾಶ ರೈ ತಮಿಳು ಅಥವಾ ಹಿಂದಿ ವಿರೋಧಿ ಎಂದಾಗುವುದಿಲ್ಲ, ಚೇತನ್ ಸಂಪೂರ್ಣ ಹಿಂದಿ ಎಂದೂ ಆಗಲ್ಲ. ನಮ್ಮತನ ಉಳಿಯಬೇಕೆಂದರೆ, ನಾವು ಇಂತಹ ನಿರ್ಧಾರ ತೆಗೆದುಕೊಳ್ಳಲೇಬೇಕು.
ತಮಿಳುನಾಡಿನಲ್ಲಿ ತಮಿಳು ಪರ ನಿಂತ ನಟ, ನಿರ್ದೇಶಕರನ್ನು ರೈ, ಚೇತನ್ ಸ್ವಾಗತಿಸಿದ್ದಾರೆ, ಕನ್ನಡ ಪರ ನಿಂತ ರೈ, ಚೇತನ್ ಅವರನ್ನು ದಕ್ಷಿಣದ ಎಲ್ಲ ಭಾಷೆಗಳ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಪ್ರಮುಖರು ಬೆಂಬಲಿಸಿದ್ದಾರೆ.
ಇಲ್ಲಿ ಯಾವುದೋ ಒಂದು ಪಾರ್ಟಿ, ಪಕ್ಷಕ್ಕೆ ತಮ್ಮ ಆತ್ಮಗೌರವ ಮಾರಿಕೊಂಡಿರುವ ಕೆಲವು ‘ಸುಶಿಕ್ಷಿತರು’ ಆ ಪಾರ್ಟಿಯನ್ನು, ಅದರ ನಾಯಕನನ್ನು ಕುರುಡರಂತೆ ಆರಾಧಿಸುತ್ತಿದ್ದಾರೆ. ಅವರ ಅಂಧಭಕ್ತಿ ಎಷ್ಟು ತಳಮಟ್ಟಕ್ಕೆ ಮುಟ್ಟಿದೆ ಎಂದರೆ, ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ಕೋಟ್ಯಂತರ ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು, ಭೋಜ್ಪುರಿಗಳು ಮತ್ತು ಈಶಾನ್ಯ ಭಾರತದ ಹತ್ತಾರು ಭಾಷಿಕರನ್ನೆಲ್ಲ ಅವರು ದೇಶದ್ರೋಹಿ ಎನ್ನುವ ಮಟ್ಟಕ್ಕೆ ಮುಟ್ಟಿದ್ದಾರೆ.
ತಮ್ಮ ಮಾತೃಭಾಷೆ, ಆಡುಭಾಷೆಗೆ ಗೌರವ ಕೊಡದ ಈ ಜನರು ಇಡೀ ದೇಶದಲ್ಲಿ ಏಕ ಸಂಸ್ಕೃತಿ, ಏಕ ಭಾಷೆ ಎಂಬ ಸಂವಿಧಾನ ವಿರೋಧಿ ಅಜೆಂಡಾದ ಪ್ರತಿಪಾದಕರೇ ಆಗಿದ್ದಾರೆ.
‘ನಮ್ಮ ಪ್ರಾದೇಶಿಕ ಭಾಷೆ ಪರ ನಾವು ಮಾತನಾಡುತ್ತೇವೆ. ಅದು ನಮ್ಮ ಹಕ್ಕು ಮತ್ತು ಕರ್ತವ್ಯ. ಹಿಂದಿಯೂ ಒಂದು ಗೌರವಯುತ ಭಾಷೆ. ಆದರೆ ಅದನ್ನು ಹೇರುವುದನ್ನು ನಾವು ಸಹಿಸಲ್ಲ’ –ಎಂದು ನಾವೆಲ್ಲ ಕನ್ನಡಿಗರಾಗಿ ಆತ್ಮವಿಶ್ವಾಸದಿಂದ ಹೇಳೋಣ.
ಇದನ್ನೂ ಸಹಿಸದ ಸ್ನೇಹಿತರನ್ನು ಕರೆದು ಕೂಡಿಸಿಕೊಂಡು ಮಾತಾಡೋಣ, ಮೊದಲು ನಿನ್ನ ‘ಏಕ ಸಂಸ್ಕೃತಿಯ ಪಕ್ಷದ ವಿಚಾರ ಬಿಡು ಮಾರಾಯ. ಆ ಪಕ್ಷದ ಪರ ಸಂದೇಶ ಹಾಕಿ ಪ್ರತಿ ಸಂದೇಶಕ್ಕೆ 2 ರೂ.ಗೆ ಮಾರಿಕೊಂಡವರ ಹುನ್ನಾರ ಇದು. ನೀನು ಆ ಸಾಲಿಗೆ ಸೇರಬೇಡ’ ಎಂದು ಹೇಳುವ ಮೂಲಕ ನಮ್ಮ ವಲಯದಲ್ಲೇ ಇರುವ ‘ಈ ಏಕ ಸಂಸ್ಕೃತಿಯ’ ಹುಂಬ ಆರಾಧಕರನ್ನು ಬದಲಿಸೋಣ ಅಲ್ಲವೆ?