ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ನಾಟಿ ಕೋಳಿಗೆ ಜಿಲ್ಲೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಕೊರೊನಾ ಸೋಂಕಿತರು ನಾಟಿ ಕೋಳಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಸಂದೇಶ ಹರಿದಾಡುತ್ತಿರುವುದರಿಂದಾಗಿ ನಾಟಿ ಕೋಳಿ ಖರೀದಿಸಲು ಜನ ಮುಗಿ ಬೀಳುತ್ತಿದ್ದಾರೆ.
ರೋಗ ನಿರೋಧಕ ಶಕ್ತಿ ವೃದ್ಧಿಸಲು ನಾಟಿ ಕೋಳಿ ಸಹಕಾರಿ ಎಂಬ ಸಲಹೆಯನ್ನು ವೈದ್ಯರು ಹೇಳಿದ್ದಾರೆ ಎಂಬ ಸಂದೇಶಗಳು ಹರಿದಾಡುತ್ತಿದ್ದು, ಜನ ನಾಟಿ ಕೋಳಿ ಹುಡುಕಾಡಿ ಖರೀದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸದ್ಯ ಜಿಲ್ಲೆಯ ರೋಣ ಪಟ್ಟಣದಲ್ಲಿ ನಾಟಿ ಕೋಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಹಳ್ಳಿಗಳಿಂದ ಬೆಳ್ಳಂ ಬೆಳಿಗ್ಗೆ ಪಟ್ಟಣಕ್ಕೆ ಬಂದು ಜನರು, ನಾಟಿ ಕೋಳಿ ಖರೀದಿಸುತ್ತಿದ್ದಾರೆ. ತಾವು ಸಾಕಿದ್ದ ನಾಟಿ ಕೋಳಿಗಳನ್ನೆಲ್ಲ ಅವರು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನರು ಕೂಡ ಮುಗಿಬಿದ್ದು ನಾಟಿ ಕೋಳಿ ಖರೀದಿಸುತ್ತಿದ್ದಾರೆ.
ನಾಟಿ ಕೋಳಿ ಮಾರಾಟಗಾರರ ಕೋಳಿಗಳು ಚೌಕಾಸಿ ಇಲ್ಲದೆ, ಬೆಳಿಗ್ಗೆ 8 ಗಂಟೆಯೊಳಗೆ ಮರಾಟವಾಗುತ್ತಿವೆ. ಇದರಿಂದಾಗಿ ನಾಟಿ ಕೋಳಿ ವ್ಯಾಪಾರಸ್ಥರು ಫುಲ್ ಖುಷಿ ಆಗುತ್ತಿದ್ದಾರೆ. ಇಲ್ಲಿಯವರೆಗೆ ಒಂದು ನಾಟಿ ಕೋಳಿ ರೂ. 250ಕ್ಕೆ ಮಾರಾಟವಾಗುತ್ತಿದ್ದವು. ಸದ್ಯ ಅದರ ದರ ರೂ. 400ರಷ್ಟಾಗಿದೆ. ದರ ಎಷ್ಟೇ ಆದರೂ ಜನರು ಮಾತ್ರ ಚೌಕಾಸಿ ಮಾಡದೆ ನಾಟಿ ಕೋಳಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ನಾಟಿ ಕೋಳಿ ಮಾಂಸದಲ್ಲಿ ಪ್ರೊಟೀನ್ ವಿಟಮಿನ್ ಅಂಶ ಹೆಚ್ಚಳವಾಗಿರುತ್ತದೆ. ದೇಹದ ಮಾಂಸ – ಖಂಡಗಳು ಗಟ್ಟಿಯಾಗಿ ಕೊರೊನಾ ವಿರುದ್ಧ ಹೋರಾಟ ಮಾಡಲು ನಾಟಿ ಕೋಳಿ ಸಹಕಾರಿಯಾಗಿವೆ ಎಂಬ ವೈದ್ಯರ ಸಂದೇಶ ಹರಿದಾಡುತ್ತಿವೆ.