ವಿಜಯಸಾಕ್ಷಿ ಸುದ್ದಿ, ಗದಗ
ಮಹಿಳೆ ಮನೆ ಅಡವಿಟ್ಟಿದ್ದನ್ನೇ ನೆಪ ಮಾಡಿಕೊಂಡ ಶಹಪೂರ ಪೇಟೆಯ ನಿವಾಸಿಯಾಗಿರುವ ಆರೋಪಿ ನಾಗರಾಜ್ ಅಂಬಸಾ ಪೂಜಾರಿ ಎಂಬ ವ್ಯಕ್ತಿ ಮಹಿಳೆಯೋರ್ವರಿಂದ ಕೊಟ್ಟ ಅಸಲು, ಅಸಲಿನ ಜೊತೆಗೆ ಬಡ್ಡಿ ಹಣ ಪಡೆದರೂ ಬಡ್ಡಿ ಹಣ ನೀಡುವಂತೆ ಮಹಿಳೆಗೆ ನಿತ್ಯ ಕಿರುಕುಳ ನೀಡುತ್ತಿರುವ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಖಾನತೋಟದ ನಿವಾಸಿ ಶಾರದಾ ಶಿವಪ್ಪ ನಾಯಕ ಎಂಬ ಮಹಿಳೆ ತನ್ನ ಮನೆಯನ್ನು ಆರೋಪಿ ನಾಗರಾಜ ಅಂಬಸಾ ಪೂಜಾರಿಗೆ 2008 ಜೂನ್ 23ರಲ್ಲಿ 60 ಸಾವಿರ ರೂ.ಗಳಿಗೆ ಅಡವಿಟ್ಟಿದ್ದಾರೆ. ಅಲ್ಲದೇ, ಆರೋಪಿ ನಾಗರಾಜನಿಗೆ 2010ರಲ್ಲಿ ಕಬ್ಜಾ ರಹಿತ ಖರೀದಿ ಕರಾರು ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಆದರೆ, ಆರೋಪಿಯು ಮಹಿಳೆ ಮನೆ ನೋಂದಣಿ ಮಾಡಿಕೊಟ್ಟ ಬಳಿಕ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಾ ಬರುತ್ತಿದ್ದಾನೆ.
2013-14 ರವರೆಗಿನ ಅಸಲು, ಬಡ್ಡಿ ಹಣ, ಮೂರು ಜೊತೆ ಬಂಗಾರದ ಕಿವಿಯೋಲೆ ಹಾಗೂ 2,90,000 ರೂ.ಗಳನ್ನು ನಾಗರಾಜ್ ಇನ್ನೂ ಬಡ್ಡಿ ಹಣ ಕೊಡಬೇಕು ಎಂದು ಪೀಡಿಸುತ್ತಿದ್ದಾನೆ. ಅಲ್ಲದೇ, ಮನೆ ನೋಂದಣಿ ರದ್ಧತಿಯ ಬಾಂಡ್ ಪೇಪರ್, ಒಡವೆಗಳನ್ನು ಕೊಡದೇ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ನೊಂದ ಮಹಿಳೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.