ಭಾವೈಕ್ಯತೆ ದಿನವೆಂದು ಆಚರಿಸಿ, ಭವನ ನಿರ್ಮಿಸಿ: ಮಲ್ಲಿಕಾರ್ಜುನ ಐಲಿ ಆಗ್ರಹ

0
Spread the love

ಫೆ.21ರಂದು ಲಿಂ.ಡಾ.ತೋಂಟದ ಸಿದ್ಧಲಿಂಗಶ್ರೀಗಳ ಜನ್ಮದಿನ
ಅಂದು ಬಾವೈಕ್ಯತೆ ಯಾತ್ರೆ, ಹಲವು ಪುಸ್ತಕಗಳ ಬಿಡುಗಡೆ

Advertisement

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಹಲವು ಪ್ರಶಸ್ತಿಗಳು ದೊರೆತಿದ್ದು, ಶ್ರೀಗಳ ಹೆಸರಿನಲ್ಲಿ ಫೆ.21ರಂದು ರಾಜ್ಯ ಸರಕಾರ ಭಾವೈಕ್ಯತೆ ದಿನವೆಂದು ಆಚರಿಸಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಒತ್ತಾಯಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಪ್ರತಿವರ್ಷ ಡಾ.ತೋಂಟದ ಸ್ವಾಮೀಜಿಗಳ ಹೆಸರಿನಲ್ಲಿ ಭಾವೈಕ್ಯತೆ ಪ್ರಶಸ್ತಿ ನೀಡಬೇಕು. ಅಲ್ಲದೇ, ನಗರದಲ್ಲಿ ಭಾವೈಕ್ಯತೆ ಭವನ ನಿರ್ಮಿಸಬೇಕೆಂದು ಆಗ್ರಹಿಸಿದ ಅವರು, ಶ್ರೀಗಳ ಆಶಯದಂತೆ ಭವನ ಕಟ್ಟಲು ನಗರದ ಹೃದಯ ಭಾಗದಲ್ಲಿರುವ ಜಾತ್ರೆಯ ಬಯಲು ಜಾಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಅದರಂತೆ ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಾನಂದಪ್ರಭು, ಶಿರೋಳದ ಗುರುಬಸವ, ಭೈರನಟ್ಟಿಯ ಶಾಂತಲಿಂಗ, ಸಂಡೂರಿನ ಪ್ರಭು, ಅರಸಿಕೆರೆಯ ಶಾಂತಲಿಂಗ, ಆಳಂದದ ಕೋರಣೇಶ್ವರ, ಯಶವಂತನಗರದ ಗಂಗಾಧರ ಮಹಾಸ್ವಾಮಿಗಳು ಹಾಗೂ ತೋಂಟದಾರ್ಯ ಮಠದ ಮಹಾಂತದೇವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಈ ಸಂದರ್ಭದಲ್ಲಿ ಲಿಂ.ಡಾ.ತೋಂಟದ ಶ್ರೀಗಳ ಕುರಿತು ಡಾ.ಜಗದೀಶ ಕೊಪ್ಪ ಹಾಗೂ ಪ್ರೊ.ಶಶಿಧರ ತೋಡಕರ ಸಂಪಾದಿಸಿದ ’ಸಮಾಜಮುಖಿ’,
ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ‘ಸನ್ನಿಧಾನ’, ವೀರನಗೌಡ ಮರಿಗೌಡರ ರಚಿಸಿದ ‘ವಿಶ್ವ ಮಾನವ’, ಜಿ.ವಿ ಹಿರೇಮಠ ರಚಿಸಿದ ‘ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಎಂಬ ಕೃತಿಗಳನ್ನು ನಿವೃತ್ತ ಗೃಹ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಬಿಡುಗಡೆಗೊಳಿಸುವರು ಎಂದು ಮಲ್ಲಿಕಾರ್ಜುನ ಐಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಚಂದ್ರು ಚವ್ಹಾಣ, ಗಂಗಾಧರ ಹಿರೇಮಠ, ಕೊಟ್ರೇಶ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೆ.21ರಂದು ಭಾವೈಕ್ಯತೆ ಯಾತ್ರೆ
ತ್ರಿವಿಧ ದಾಸೋಹಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 72ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಬಿಡುಗಡೆ ಸಮಾರಂಭವು ಫೆ.21 ರಂದು ಭಾನುವಾರ ಬೆ.11 ಗಂಟೆಗೆ ನಗರದ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಜರುಗಲಿದೆ. ಇದರ ಅಂಗವಾಗಿ ಅಂದು ಬೆ. 9 ಗಂಟೆಗೆ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತಾ ಯಾತ್ರೆ ನಡೆಯಲಿದೆ ಎಂದು ಮಲ್ಲಿಕಾರ್ಜುನ ಐಲಿ ಮಾಹಿತಿ ನೀಡಿದರು.


Spread the love

LEAVE A REPLY

Please enter your comment!
Please enter your name here