ವಿಜಯಸಾಕ್ಷಿ ಸುದ್ದಿ, ಗದಗ
ಹುಡುಗನೊಬ್ಬ ಮದುವೆಯಾಗುತ್ತೇನೆ ಎಂದು ಪಕ್ಕದ ಮನೆಯ ಅನ್ಯ ಜಾತಿಯ ಹುಡುಗಿಯನ್ನು ನಂಬಿಸಿ ಮೋಸ ಮಾಡಿರುವ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಉಮೇಶ್ ಶೇಖಪ್ಪ ಹಳ್ಳಿ ಎಂಬ ವ್ಯಕ್ತಿ ಅದೇ ಗ್ರಾಮದ ಯುವತಿಯ ಎಂಬ ಯುವತಿಗೆ ಮೋಸವೆಸಗಿದ್ದಾನೆ.
ಯುವತಿ ಹುಬ್ಬಳ್ಳಿಯಲ್ಲಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದು, ಅಲ್ಲಿಯೇ ವಾಸವಾಗಿದ್ದಳು. ಬಿಡುವಿದ್ದಾಗ ಆಗಾಗ್ಗೆ ಲಕ್ಕುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತಾಯಿ, ಅಜ್ಜಿ, ತಂಗಿ ನೋಡಲು ಮನೆಗೆ ಬರುತ್ತಿದ್ದಳು.
ಯುವತಿ ಊರಿಗೆ ಬಂದಾಗಲೆಲ್ಲಾ ಸಲುಗೆಯಿಂದ ಮಾತನಾಡಿಸುತ್ತಿದ್ದ ಉಮೇಶ್ ಕಳೆದ ನಾಲ್ಕೈದು ವರ್ಷಗಳಿಂದ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂಬ ಬಣ್ಣ ಬಣ್ಣದ ಮಾತುಗಳನ್ನಾಡಿ ನಂಬಿಸಿ ಉಮೇಶ್ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ.
ಯುವತಿಯ ಜನ್ಮದಿನದಂದು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ, ಕರೆದಾಗಲೆಲ್ಲಾ ಮಂಚಕ್ಕೆ ಬರಬೇಕು ಎಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೇ, ಬೇರೆ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡಿರುವ ಯುವತಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.