ವಿಜಯಸಾಕ್ಷಿ ಸುದ್ದಿ, ಕೊಲ್ಕತ್ತಾ
ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದ ಟಿಎಂಸಿಯ ಹಿರಿಯ ನಾಯಕ ಹಾಗೂ ಕೃಷಿ ಸಚಿವ ಶೋಭಾನ್ ದೇವ್ ಚಟ್ಟೋಪಾಧ್ಯಾಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಲು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಹಾದಿ ಸುಗಮವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ನಂದಿ ಗ್ರಾಮದ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು ಸೋಲು ಕಂಡಿದ್ದರು. ಸಿಎಂ ಆಗಿರುವ ಅವರು, 6 ತಿಂಗಳೊಳಗೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕಾಗಿದೆ. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸಚಿವ ಪಾರ್ಥ ಚಟರ್ಜಿ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ವಿಧಾನಸಭಾಧ್ಯಕ್ಷ ಬಿಮ್ ಬಂಡೋಪಾಧ್ಯಾಯ ಅವರಿಗೆ ಚಟ್ಟೋಪಾಧ್ಯಾಯ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿ ಮಾತನಾಡಿದ ಅವರು, ನಾನು ಪಕ್ಷದ ನಿರ್ಧಾರಕ್ಕೆ ವಿಧೇಯನಾಗಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಹೀಗಾಗಿ ಭವಾನಿಪುರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಕೊರೊನಾದಿಂದ ಟಿಎಂಸಿ ಮುಖಂಡ ಕಜಾಲ್ ಸಿನ್ಹಾ ಅವರು ನಿಧನರಾದ ಹಿನ್ನೆಲೆಯಲ್ಲಿ ನಡೆಯಲಿರುವ ಖಾರ್ದಾ ಕ್ಷೇತ್ರದ ಮರು ಚುನಾವಣೆಯಲ್ಲಿ ಶೋಭಾನ್ ದೇವ್ ಚಟ್ಟೋಪಾದ್ಯಾಯ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೇ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗುವ ಸಾಧ್ಯತೆ ಇದೆ ಎಂದು ಹಲವರು ಹೇಳುತ್ತಿದ್ದಾರೆ.