ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಭೀತಿ ಇದ್ದು, ನಿನ್ನೆ (ಡಿ.೨) ಸಂಜೆ ಇಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಆದರೆ, ಗುರುವಾರ ಸಂಜೆಯ ಅನಧಿಕೃತ ವರದಿ ಪ್ರಕಾರ ರಾಜ್ಯದ ಇನ್ನೂ 16 ಜನರಿಗೆ ಓಮಿಕ್ರಾನ್ ಸೋಂಕು ಖಚಿತ ಪಟ್ಟಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದರು.
ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿರುವುದು ಗಂಭೀರ ವಿಷಯವಾಗಿದ್ದು, ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ
ಜನರು ಭಯಪಡದೇ ಜಾಗೃತರಾಗಿರಬೇಕು. ಆದರೆ, ಸರ್ಕಾರ ಭಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅದರಂತೆ, ಕೊರೊನಾ ಒಂದು ಮತ್ತು ಎರಡನೇ ಅಲೆಗಿಂತ ಮೂರನೇ ಅಲೆಯಾಗಿ ಪರಿವರ್ತನೆಗೊಂಡಿರುವ ಕೊರೊನಾ ಓಮಿಕ್ರಾನ್ ಕೆಟ್ಟ ಪರಿಣಾಮ ಬೀರುತ್ತಿದೆ. ಇದು ಅತ್ಯಂತ ವೇಗವಾಗಿ ಹರಡುವ ಸ್ವಭಾವ ಹೊಂದಿದೆ. ನ.20 ರಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ 250 ಜನರ ಪೈಕಿ ರಾಜ್ಯ ಸರ್ಕಾರದ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದರು.
ರಾಜ್ಯ ಸರ್ಕಾರ ಸಮ್ಮೇಳನದಲ್ಲಿ ಪಾಲ್ಗೊಂಡವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಮಾಡುವಲ್ಲಿ ವಿಫಲವಾಗಿದೆ. ಅಲ್ಲದೇ, ಓಮಿಕ್ರಾನ್ ತಪಾಸಣಾ ವರದಿ ವಿಳಂಬವಾಗುತ್ತಿದ್ದು, ವರದಿಗಾಗಿ ಸುಮಾರು ಹನ್ನೆರಡು ದಿನಗಳವರೆಗೆ ಕಾಯಬೇಕಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಫ್ ಎಚ್ ಜಕ್ಕಪ್ಪನವರ, ಬಸವರಾಜ್ ಕಡೆಮನಿ, ಅಶೋಕ ಮಂದಾಲಿ, ವಾಸಣ್ಣ ಕುರುಡಗಿ ಸೇರಿದಂತೆ ಹಲವರು ಇದ್ದರು.