ವಿಜಯಸಾಕ್ಷಿ ಸುದ್ದಿ, ದೆಹಲಿ/ಮಧ್ಯಪ್ರದೇಶ
‘ರೈತರ ಕಲ್ಯಾಣವೇ ನಮ್ಮ ಸರ್ಕಾರದ ಆದ್ಯತೆ. ನೂತನ ಕೃಷಿ ಕಾಯ್ದೆಗಳ ಸುತ್ತಲಿನ ಸುಳ್ಳುಗಳನ್ನು ನಂಬಬೇಡಿ. ರೈತರ ಅಭ್ಯುದಯವೇ ನಮ್ಮ ಪ್ರದಾನ ಕರ್ತವ್ಯವಾಗಿದೆ. ನಾವು ಮಾಡುವ ಸುಧಾರಣೆ ರೈತರಿಗೆ ನೆರವಾದರೆ ಸಾಕು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು.
ಮಧ್ಯಪ್ರದೇಶದಲ್ಲಿ ನಡೆದ ಕಿಸಾನ್ ಸಮಾವೇಶದಲ್ಲಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ‘ಕೃಷಿ ಕಾಯ್ದೆ ರಾತ್ರೋರಾತ್ರಿ ಜಾರಿಗೆ ಬಂದಿಲ್ಲ. ಈ ಕಾಯ್ದೆಗಳನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿಲ್ಲ, ಬದಲಿಗೆ ದಶಕಗಳ ಕಾಲ ಚರ್ಚೆ ನಡೆಸಿದ್ದೇವೆ. ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿ ಕ್ರಮಕೈಗೊಂಡಿದ್ದೇವೆ. ರೈತರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಿದ್ದನಿದ್ದೇನೆ’ ಎಂದು ತಿಳಿಸಿದರು.
‘ಈ ಕೃಷಿ ಕಾಯ್ದೆಗಳಿಂದ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಕಳೆದು ಹೋಗುತ್ತದೆ ಎಂದು ಸುಳ್ಳು ಹೇಳಲಾಗುತ್ತಿದೆ. ಕೆಲವರು ರೈತರ ಹೆಗಲ ಮೇಲೆ ಬಂದೂಕಿಟ್ಟು ಯುದ್ಧ ಮಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳು ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಪಕ್ಷಗಳು ರಾಜಕೀಯ ಮಾಡುತ್ತಿವೆ. ರೈತರ ಭೂಮಿ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
‘ಕಳೆದ ೨೨ ವರ್ಷಗಳಿಂದ ಎಲ್ಲಾ ರಾಜ್ಯ ಸರ್ಕಾರಗಳು ಈ ಕುರಿತು ಚರ್ಚಿಸಿವೆ. ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಸೇರಿ ಚರ್ಚೆ ನಡೆಸಿದ್ದಾರೆ. ಈ ಕಾಯ್ದೆಗಳುಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಕಾಯ್ದೆಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದೇ ಅಂಶಗಳಿವೆ. ಆದರೆ, ಅವರು ಚುನಾವಣಾ ಪ್ರಣಾಳಿಕೆ ಈಡೇರಿಸಿಲ್ಲ. ಆ ಪಕ್ಷಗಳಿಗೆ ಇಂದು ನೋವಾಗಿದೆ. ನಾವು ತರಲಾಗದ್ದನ್ನು ಮೋದಿ ಹೇಗೆ ತರುತ್ತಾರೆ ಎಂದು ಅವರು ಕೇಳಿಕೊಳ್ಳುತ್ತಿದ್ದಾರೆ. ಮೋದಿ ಏಕೆ ಇದರ ಲಾಭ ಪಡೆಯಬೇಕೆಂಬುದು ಅವರ ಹುನ್ನಾರ. ನಾನು ಇದರ ಲಾಭ ಪಡೆಯುವುದಿಲ್ಲ. ಲಾಭವನ್ನು ನಿಮಗೆ ಮತ್ತು ನಿಮ್ಮ ಪ್ರಣಾಳಿಕೆಗಳಿಗೆ ನೀಡುತ್ತೇನೆ. ನನಗೆ ರೈತರ ಅಭ್ಯುದಯ ಮುಖ್ಯ. ಸುಳ್ಳು ಹರಡುವುದನ್ನು ನಿಲ್ಲಿಸಿ’ ಎಂದು ಕಿವಿಮಾತು ಹೇಳಿದರು.
‘ಪ್ರಪಂಚದ ರೈತರು ಅತ್ಯಾಧುನಿಕ ತಂತ್ರಜ್ಞಾನದಿಂದ ಮುಂದುವರೆಯುತ್ತಿರುವಾಗ ನಮ್ಮ ದೇಶದ ರೈತರನ್ನು ಹಿಂದುಳಿಯಲು ನಾವು ಬಿಡುವುದಿಲ್ಲ. ಅವರು ಸ್ವಾಮಿನಾಥನ್ ವರದಿ ಜಾರಿಗೊಳಿಸಲಿಲ್ಲ. ನಮ್ಮ ಸರ್ಕಾರ ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿದೆ. ಮಧ್ಯಪ್ರದೇಶದ ಜನರಿಗೆ ಅವರ ಬಗ್ಗೆ ತಿಳಿದಿದೆ. ಅವರು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಅದರ ಪ್ರಯೋಜನ ನಿಮಗೆ ಸಿಕ್ಕಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.