ವಿಜಯಸಾಕ್ಷಿ ಸುದ್ದಿ, ಗದಗ:
ಚುನಾವಣೆ ಮುಗಿದರೂ ಚುನಾವಣೆಯ ದ್ವೇಷ ಮುಕ್ತಾಯಗೊಳ್ಳುವುದಿಲ್ಲ. ಎಲೆಕ್ಷನ್ ಹಗೆ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೆ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಕಳೆದ ಡಿಸೆಂಬರ್ ನಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣ ನೀನೇ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಅವಳಿ ನಗರದ ವಿವೇಕಾನಂದ ನಗರದ ಎರಡನೇ ಕ್ರಾಸ್ ನಲ್ಲಿ ನಡೆದಿದೆ.
ಹಾತಲಗೇರಿ ರಸ್ತೆಯ ಹಮಾಲರ ಕಾಲನಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ತಿಪ್ಪಣ್ಣ ಹನಮಂತಪ್ಪ ಘೋರ್ಪಡೆ ಎಂಬುವವರ ಮೇಲೆ ಅದೇ ಕಾಲನಿಯ ನಿವಾಸಿಗಳಾದ ಶರಣಪ್ಪ ಗೊಳಗೊಳಕಿ ಹಾಗೂ ಪ್ರಭುಕುಮಾರ ಗೊಳಗೊಳಕಿ ಎಂಬ ಇಬ್ಬರು ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾಗಿರುವ ತಿಪ್ಪಣ್ಣ ಔಷಧ ತರಲು ಮೆಡಿಕಲ್ ಸ್ಟೋರ್ ಗೆ ಹೋಗಿದ್ದ ವೇಳೆ ಈ ಇಬ್ಬರೂ ಆರೋಪಿಗಳು ಅಡ್ಡಗಟ್ಟಿ ನಗರಸಭೆ ಚುನಾವಣೆಯಲ್ಲಿ ನನ್ನ ತಮ್ಮನ ಹೆಂಡತಿ ಸೋಲಲು ನೀನೇ ಕಾರಣ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿದ್ದಲ್ಲದೇ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಪ್ಪಣ್ಣ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಪ್ಪನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿರುವ ಗೊಳಗೊಳಕಿ ಸಹೋದರರು ಗದಗ-ಬೆಟಗೇರಿ ನಗರಸಭೆಯಲ್ಲಿ ಅವಳಿ ನಗರದ 11ನೇ ವಾರ್ಡಿನ ಹಿಂದುಳಿದ ವರ್ಗ ‘ಎ’ ಮೀಸಲು ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಸಿದ್ದ ಅಶ್ವಿನಿ ಊರ್ಫ ಆಶಾಬಿ ಗೊಳಗೊಳಕಿ ಅವರ ಸಂಬಂಧಿಕರಾಗಿದ್ದಾರೆ.
ಅವಳಿ ನಗರದ 11ನೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಕುಂಕುಮಾ ಹದ್ದಣ್ಣವರ, ಜೆಡಿಎಸ್‌ನಿಂದ ಪುಷ್ಪಾ ಪತ್ತಾರ, ಬಿಜೆಪಿಯಿಂದ ಶ್ವೇತಾ ದಂಡಿನ, ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಲಲಿತಾ ಮಾಯಣ್ಣವರ ಸೇರಿ ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯ ಅಭ್ಯರ್ಥಿ ಶ್ವೇತಾ ದಂಡಿನ ಅಭೂತಪೂರ್ವ ಗೆಲುವು ಸಾಧಿಸಿದ್ದರು.