ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ನರಗುಂದ
ಸಂತ್ರಸ್ತರಿಗಾಗಿ ಸರ್ಕಾರ 14 ಸ್ಥಳಾಂತರ ಗ್ರಾಮಗಳ ಕುಟುಂಬಗಳಿಗೆ ಸುಮಾರು 8,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಸರ್ಕಾರ ನಿರ್ಮಿಸಿಕೊಟ್ಟ ಈ ಮನೆಗಳ ಸದುಪಯೋಗಪಡಿಸಿಕೊಳ್ಳುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಅವರು ತಾಲೂಕಿನ ಕುರ್ಲಗೇರಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಲಾದ ನರಗುಂದ -ಕುರ್ಲಗೇರಿ- ಗದಗ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅರಭಾವಿ ಚಳ್ಳಕೇರಿ ರಾಷ್ಟ್ರೀಯ ಹೆದ್ದಾರಿ 45 ರ ಕಿ.ಮೀ 90 ರಿಂದ 94.60 ರವರೆಗೆ ರಸ್ತೆ ಸುಧಾರಣೆ (ನರಗುಂದದಿಂದ ಕುರ್ಲಗೇರಿವರೆಗೆ) ಅಂದಾಜು 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಗ್ರಾಮಸ್ಥರು ಉತ್ತಮ ಕಾಮಗಾರಿ ನಡೆಯುವಂತೆ ನಿಗಾವಹಿಸಬೇಕು ಎಂದರು.
ಸ್ಥಳಾಂತರ ಗ್ರಾಮಗಳ ನಿವಾಸಿಗಳಿಗೆ ನಿರ್ಮಿಸಲಾದ ಮನೆಗಳನ್ನು ಸೌಹಾರ್ದತೆಯಿಂದ ಎಲ್ಲರೂ ಸೇರಿಕೊಂಡು ಮನೆ ಹಂಚಿಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ನಿರ್ಮಿಸಿಕೊಟ್ಟ ಮನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ತಿಳಿಸಿದರು. ಕೆಲವು ಕುಟುಂಬಗಳಿಗೆ ಮನೆ ಹಂಚಿಕೆಯಲ್ಲಿ ಕೊರತೆ ಅಥವಾ ಕಡಿಮೆ ಆದಲ್ಲಿ ಮುಂದಿನ ದಿನಗಳಲ್ಲಿ ಅವರಿಗೂ ಸಹ ಮನೆ ನಿರ್ಮಿಸಿಕೊಡಲು ಸರ್ಕಾರ ಸಿದ್ಧವಿದ್ದು, ಸರ್ಕಾರ ಸದಾ ನಿಮ್ಮೊಂದಿಗಿದೆ ಎಂದರು.
ಕುರ್ಲಗೇರಿ ನಿವಾಸಿಗಳ ಬೇಡಿಕೆಯಾದ ಸೇತುವೆ ನಿರ್ಮಾಣ , ರಸ್ತೆನಿರ್ಮಾಣ ಕಾಮಗಾರಿಗಳನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಅವರಾದಿ, ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಂಕರಪ್ಪ ಬ್ಯಾಹಟ್ಟಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಮ್.ಎಸ್. ಪಾಟೀಲ, ಮುದುಕಯ್ಯ ಹಿರೇಮಠ, ಬಸವರಾಜ ಬ್ಯಾಹಟ್ಟಿ, ಈಶ್ವರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರು , ತಹಶೀಲ್ದಾರ ಮಹೇಂದ್ರ, ಶಿಕ್ಷಕ ಎಸ್.ಪಿ.ದೊಡ್ಡಮನಿ ಸೇರಿದಂತೆ ಇತರರು ಇದ್ದರು.