ಬೆಂಗಳೂರು: ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೈಕೋರ್ಟ್ ತನಿಖೆಗೆ ತಾತ್ಕಾಲಿಕ ತಡೆ ನೀಡಿದ್ದು, ಐಟಿ ಘೋಷಣೆಗಳ ಬಗ್ಗೆ ಸ್ಪಷ್ಟನೆ ಕೇಳಿದೆ.
ಲೋಕಾಯುಕ್ತ ಅಧಿಕಾರಿಗಳು ಡಿಸೆಂಬರ್ 24ರಂದು ಬೆಳಿಗ್ಗೆ 50ಕ್ಕೂ ಹೆಚ್ಚು ಅಧಿಕಾರಿಗಳೊಂದಿಗೆ 13 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಬೆಂಗಳೂರಿನ ಹಲಸೂರು ನಿವಾಸ ಸೇರಿದಂತೆ ಒಟ್ಟು 7 ಮನೆಗಳು, ಕೊಡಗಿನಲ್ಲಿ 2 ಕಾಫಿ ಎಸ್ಟೇಟ್‌ಗಳು, ಹೆಚ್.ಡಿ.ಕೋಟೆಯಲ್ಲಿನ ರೆಸಾರ್ಟ್ ಹಾಗೂ 35 ಎಕರೆ ಕೃಷಿ ಜಮೀನು ದಾಖಲೆಗಳು ಪತ್ತೆಯಾಗಿದ್ದವು.
ದಾಳಿಯಲ್ಲಿ ₹66,500 ನಗದು, ₹2.99 ಲಕ್ಷ ಮೌಲ್ಯದ ಚಿನ್ನ, ₹1.29 ಕೋಟಿ ಮೌಲ್ಯದ ಎಫ್‌ಡಿ ಸೇರಿ ಒಟ್ಟು ₹14.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಹೇಳಿತ್ತು.
ಲೋಕಾಯುಕ್ತ ವಾದ ಪ್ರಕಾರ, ಶೇ.131ರಷ್ಟು ಆದಾಯ ಮೀರಿದ ಆಸ್ತಿ ಗಳಿಕೆ ಕಂಡುಬಂದಿದೆ. ಆದರೆ ಅರ್ಜಿದಾರರ ಪರ, ಎಲ್ಲ ಆಸ್ತಿಗಳ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಘೋಷಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಫೆ.27ರವರೆಗೆ ತನಿಖೆಗೆ ತಾತ್ಕಾಲಿಕ ತಡೆ ನೀಡಿ, ಐಟಿ ಇಲಾಖೆಯಿಂದ ವಿವರ ಸಲ್ಲಿಸಲು ಸೂಚಿಸಿದೆ. ಪ್ರಕರಣದ ಮುಂದಿನ ಹಂತದ ಬೆಳವಣಿಗೆಗಳತ್ತ ರಾಜಕೀಯ ಹಾಗೂ ಆಡಳಿತ ವಲಯದ ಕಣ್ಣು ನೆಟ್ಟಿದೆ.



