ವಿಜಯಸಾಕ್ಷಿ ಸುದ್ದಿ, ಮುಂಬಯಿ
ಸೋಂಕಿತ ಮಹಿಳೆಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ನಡೆದಿತ್ತು. ಕುಟುಂಬದವರ ಆಕ್ರಂದನ ಕೂಡ ಮುಗಿಲು ಮುಟ್ಟಿತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಮಹಿಳೆ ಎದ್ದು ಕುಳಿತಿರುವ ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದೆ.
76 ವರ್ಷದ ಮಹಿಳೆ ಈ ರೀತಿಯಾಗಿ ಎದ್ದು ಕುಳಿತಿದ್ದಾರೆ. ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷಗಳಿರುವಾಗ ಎಚ್ಚರಗೊಂಡು ಎದ್ದು ಕುಳಿತಿದ್ದಾರೆ. ಶಕುಂತಲಾ ಗಾಯಕ್‌ವಾಡ್ ಅವರಿಗೆ ಇತ್ತೀಚೆಗಷ್ಟೇ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಅವರನ್ನು ಕಾರಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಆದರೆ, ಅವರು ಕಾರಿನಲ್ಲಿ ಕುಸಿದು ಬಿದ್ದಿದ್ದರು. ಹೀಗಾಗಿ ಕುಟುಂಬದವರು ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.
ಕೆಲವು ಸಮಯದ ನಂತರ ಮಹಿಳೆ ಕಣ್ಣು ತೆರೆದು ಅಳಲು ಪ್ರಾರಂಭಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಚಿಕಿತ್ಸೆಗಾಗಿ ಮಹಿಳೆಯನ್ನು ಸಿಲ್ವರ್ ಜುಬ್ಲೀ ಆಸ್ಪತ್ರೆಗೆ ದಾಖಲಿಸಿದ್ದಾರೆ.