ವಿಜಯಸಾಕ್ಷಿ ಸುದ್ದಿ, ಗದಗ
ಎಲ್ಲೆಡೆ ಈಗ ಅಕ್ರಮ ಮದ್ಯ ಮಾರಾಟದ್ದೇ ಸುದ್ದಿ. ಪ್ರತಿ ಹಳ್ಳಿಯಲ್ಲೂ ಅಕ್ರಮ ಮದ್ಯ ಮಾರಾಟದ ದಂದೆಕೋರರು ಯಾವುದೇ ಅಳಕಿಲ್ಲದೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಎಷ್ಟೋ ಸಂಸಾರಗಳಲ್ಲಿ ಪಾನಮತ್ತರು ಜಗಳ ಮಾಡಿ ಹಾದಿ ರಂಪ-ಬೀದಿ ರಂಪ ಮಾಡುತ್ತಾರೆ. ಇಂತಹ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರೇ ಬೀದಿಗೆ ಇಳಿದಿದ್ದಾರೆ.
ನೆಮ್ಮದಿ ಹಾಳು
ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ಮಹಿಳೆಯರು, ಅಕ್ರಮ ಮದ್ಯ ಮಾರಾಟದ ದಂದೆಕೋರರಿಗೆ ಕಡಿವಾಣ ಹಾಕಿ ಎಂದು ಗ್ರಾಮ ಪಂಚಾಯತಿಗೆ ಮನವಿ ನೀಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ದಿನವೂ ಕೆಲವು ಕುಡುಕರು ನಮ್ಮ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಪಾನಮತ್ತರಾಗಿ ಬಂದು ಹೆಂಡತಿ -ಮಕ್ಕಳೊಂದಿಗೆ ಜಗಳ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಟೆಟ್ರಾ ಪ್ಯಾಕೇಟುಗಳು ಕಂಡು ಬರುತ್ತಿವೆ. ಬಸ್ ನಿಲ್ದಾಣಗಳಲ್ಲಿ ಈಗ ಜನರಿಲ್ಲದ ಕಾರಣ ಕುಡುಕರು ಅವುಗಳನ್ನು ತಮ್ಮ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಅಕ್ರಮ ಮದ್ಯ ಮಾರಾಟದ ದಂದೆಕೋರರಿಗೆ ಅಬಕಾರಿ ಅಧಿಕಾರಿಗಳ ಹಾಗೂ ಪೊಲೀಸರ ಕುಮ್ಮುಕ್ಕು ಇದೆ. ಹೀಗಾಗಿಯೇ ಗ್ರಾಮದಲ್ಲಿ ಎಲ್ಲಿ ಬೇಕಾದಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮದ ಅಶಾಂತಿಗೆ ಇವರೇ ಕಾರಣ ಎಂದು ಮಹಿಳೆಯರು ಆರೋಪಿಸಿದರು.
ಹಣ ಕದ್ದು ಕುಡೀತಾರೆ
ತಂದೆಯಿಲ್ಲದ ಮನೆಯಲ್ಲಿ ತಾಯಿ ಒಬ್ಬಳೇ ದುಡಿಯೋದು. ದುಡಿದ ಹಣ ಮನೆಯಲ್ಲಿಟ್ಟಾಗ ನನ್ನ ಸಹೋದರರು ಆ ಹಣ ಕದ್ದು ಸಾರಾಯಿ ಕುಡಿಯಲು ಹೋಗುತ್ತಾರೆ ಎಂದು ಯುವತಿಯೊಬ್ಬಳು ಪಂಚಾಯತಿಯ ಆವರಣದಲ್ಲಿಯೇ ಕಣ್ಣೀರು ಹಾಕಿದಳು. ಗ್ರಾಮದ ಮಹಿಳೆಯರು ಮನವಿಗೆ ಸ್ಪಂದಿಸಿದ ಪಿಡಿಒ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಹಿಂದೆಯೂ ಕದಾಂಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗೆ ಮಹಿಳೆಯರೇ ಬೆಂಕಿ ಹಚ್ಚಿದ್ದರು. ಆದರೂ ಪೊಲೀಸರು, ಅಬಕಾರಿ ಇಲಾಖೆಯವರು ಬುದ್ಧಿ ಕಲಿತಿಲ್ಲ.