ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯ ಸರಕಾರ ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆಗೆ ಮೂಗುದಾರ ಹಾಕಿದ್ದು, ಅಧಿಕಾರಿಗಳು ನಂಬಿಕಾರ್ಹ ಅಧಿಕೃತ ಕರ್ತವ್ಯ ನಿರ್ವಹಿಸುವುದನ್ನು ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆಗಳ ಮೂಲಕ ಅನಪೇಕ್ಷಿತ ಹೇಳಿಕೆ ನೀಡುವುದನ್ನು ನಿಷೇಧಿಸಿ ಮುಖ್ಯ ಕಾರ್ಯದರ್ಶಿ ರವಿಕುಮಾರ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ನೌಕರ, ಆಕಾಶವಾಣಿ, ದೂರದರ್ಶನ, ಸಾರ್ವಜನಿಕ ಮಾಧ್ಯಮಗಳಲ್ಲಿ ವಾಸ್ತವ ಹೇಳಿಕೆ ಅಥವಾ ಅಭಿಪ್ರಾಯ ನೀಡುವುದಾಗಲಿ, ಅನಾಮಧೇಯವಾಗಿ, ಗುಪ್ತನಾಮದಲ್ಲಿ ಬೇರೊಬ್ಬರ ಹೆಸರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಾರದು.

ಅಧಿಕೃತ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದೇ ಸರ್ಕಾರದ ನೀತಿ, ನಿರ್ಧಾರದ ಬಗ್ಗೆ ಪ್ರತಿಕೂಲ ಟೀಕೆ, ಮಾನಹಾನಿ, ನಿಂದನೆ ಸೇರಿದಂತೆ ಇತರ ವಿಷಯಗಳ ಸಮರ್ಥನೆಗಾಗಿ ನ್ಯಾಯಾಲಯ ಅಥವಾ ಪತ್ರಿಕೆಗಳ ಮೊರೆ ಹೋಗುವಂತಿಲ್ಲ.

ಅಗತ್ಯವಿದ್ದಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಅಥವಾ ಇತರ ಅಧಿಕೃತ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಲು ವೈಯಕ್ತಿಕ ಸಾಮಾಜಿಕ ಖಾತೆಗಳನ್ನು ಬಳಸದೇ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಸರ್ಕಾರ ಅಥವಾ ಇಲಾಖೆಯ ಅಧಿಕೃತ ಖಾತೆಗಳನ್ನು ಬಳಸಬೇಕು.
ಇಲಾಖೆಯ ಅಥವಾ ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳು ವೈಯಕ್ತಿಕ ಸಾಧನೆ ಎಂಬoತೆ ಬಿಂಬಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಈ ಆದೇಶಕ್ಕೆ ವ್ಯತಿರಿಕ್ತವಾಗಿ ಅಧಿಕಾರಿ, ನೌಕರ ಸರ್ಕಾರದ ಕಾರ್ಯನೀತಿಗೆ ಅನಪೇಕ್ಷಿತ ವೇದಿಕೆಗಳಲ್ಲಿ ಸ್ವಂತ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಿಸ್ಸಿಗೆ ಧಕ್ಕೆ ಉಂಟು ಮಾಡುವ, ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.