ಅಧಿಕಾರಿಗಳು ಬಡ್ಡಿ ವ್ಯವಹಾರ ಮಾಡ್ತಾರೆ ಹೊರತು ಜನರ ತೊಂದರೆಗೆ ಸ್ಪಂದಿಸಲ್ಲ: ಬಿ.ಸಿ.ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

Advertisement

-ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಬಯೋಮೆಟ್ರಿಕ್ ಮಾಡಬೇಕು

ಅಂಬೇಡ್ಕರ್ ನಿಗಮದ ಅಧಿಕಾರಿಯನ್ನ ಅಮಾನತುಗೊಳಿಸಿ

ಜಿಲ್ಲಾಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ದಿನಗಳು ಮಾತ್ರ ಕಚೇರಿಯಲ್ಲಿ ಇರುತ್ತಾರೆ. ಇನ್ನುಳಿದ ದಿನ ಊರಿಗೆ ಹೋಗಿ ಬಡ್ಡಿ ವ್ಯವಹಾರ ಮಾಡ್ತಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.

ಕೊಪ್ಪಳದ ಕಿಮ್ಸ್‌ನಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ‌ ಪರಿಶೀಲನೆ ಮಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳ ಬೇಜವಾಬ್ದಾರಿತನದ ಉತ್ತರದಿಂದ ಕೆಂಡಾಮಂಡಲರಾಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ. ಇನ್ನು ಮುಂದೆ ಅವರಿಗೂ ಬಯೋಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಅಂದಾಗ ಮಾತ್ರ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಾದರೂ ಕಚೇರಿಯಲ್ಲಿ ಇರುತ್ತಾರೆ ಎಂದು ಸಚಿವರು ಸಲಹೆ ನೀಡಿದರು.

ಅಂಬೇಡ್ಕರ್ ನಿಗಮದ ಅಧಿಕಾರಿ ಕಳೆದ ಕೆಡಿಪಿ ಸಭೆಯಲ್ಲಿ ಕಾಮಗಾರಿಯೊಂದರ ಕುರಿತು ಇಂದಿನ ಸಭೆಯಲ್ಲೂ ಮಾಹಿತಿ ನೀಡುವಲ್ಲಿ ತಡಬಡಾಯಿಸಿದ್ದರಿಂದ ಸಚಿವರು ಜಿಪಂ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಿಇಓ ಅವರು ಅಂಬೇಡ್ಕರ್ ನಿಗಮದ ಅಧಿಕಾರಿಗೆ ಡೆಡ್‌ಲೈನ್ ನೀಡಿದರೂ ಉದಾಸೀನ ಮಾಡಿರುವುದಾಗಿ ದೂರಿದರು. ಹಾಗಾಗಿ ಅಂಬೇಡ್ಕರ್ ನಿಗಮದ ಅಧಿಕಾರಿಯನ್ನು ಅಮಾನತುಗೊಳಿಸುವ, ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿ ಎಂದು ಸಚಿವ ಬಿ.ಸಿ.ಪಾಟೀಲರು ತಿಳಿಸಿದರು.

ಭೂ ಸೇನಾ ನಿಗಮದಡಿ ಯಲಬುರ್ಗಾ ಭಾಗದಲ್ಲಿ ಸುಮಾರು 63 ಕೋಟಿ ರೂಪಾಯಿ ಅವ್ಯವಹಾರದ ದೂರುಗಳಿವೆ. ಜೊತೆಗೆ ಭೂಸೇನೆಯ ಅಧಿಕಾರಿಗಳೇ ಅವ್ಯವಹಾರದ ತನಿಖೆ‌ ನಡೆಸಿದಾಗ ಸುಮಾರು 7-8 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ದೂರಿದರು.

ಇದಕ್ಕೆ ಉತ್ತರಿಸಿದ ಭೂಸೇನಾ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಚಿಂಚೋಳಿಕರ್, ಅದು ಈ ಹಿಂದೆ ಇದ್ದ ಅಧಿಕಾರಿಗಳಿಂದ ಆಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.

ಭೂ ಸೇನಾ ನಿಗಮದವರು ಅನುದಾನ ಬಂದಾಗ ಮಾತ್ರ ಕಾಮಗಾರಿ ನಡೆಸುತ್ತಾರೆ. ಅನುದಾನ ಮುಗಿದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಾರೆ. ಮತ್ತೇ ಅನುದಾನ ಬಂದ ಮೇಲೆ ಕಾಮಗಾರಿ ಶುರು ಮಾಡೊ ಪರಿಪಾಠ ರೂಢಿಸಿಕೊಂಡಿದ್ದಾರೆ. ಮೊದಲು ಇದನ್ನು ಕೈಬಿಡಿ. ಕಾಮಗಾರಿ ಪೂರ್ಣಗೊಳಿಸಿ ಆನಂತರ ಸರಕಾರದ ಅನುದಾನವನ್ನು ಕ್ಲೇಮ್ ಮಾಡಿ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಸಭೆಯಲ್ಲಿ ಶಾಸಕರಾದ ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಸಂಸದ ಕರಡಿ ಸಂಗಣ್ಣ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಪಂ ಉಪಾಧ್ಯಕ್ಷ ಬೀನಾ ಬೇಗಂ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ರಘುನಂದನ್ ಮೂರ್ತಿ, ಎಸ್‌ಪಿ ಟಿ.ಶ್ರೀಧರ್, ಎಸಿ ನಾರಾಯಣರಡ್ಡಿ‌ ಕನಕರಡ್ಡಿ, ಎಡಿಸಿ ಎಂ.ಪಿ. ಮಾರುತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here