ವಿಜಯಸಾಕ್ಷಿ ಸುದ್ದಿ, ಮಂಡ್ಯ
ಮೇಲಧಿಕಾರಿ ಇಲ್ಲದೆಯೇ ಆರ್ ಟಿಓ ಚಾಲಕನೋರ್ವ ರಸ್ತೆ ಬದಿ ಇಲಾಖೆ ಜೀಪ್ ನಿಲ್ಲಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಹೊರವಲಯದ ಶಾಂತಿ ಕಾಲೇಜಿನ ಬಳಿ ಮಂಡ್ಯ ಆರ್ ಟಿಓ ಇಲಾಖೆಯ ಜೀಪ್ ಚಾಲಕ ತನ್ನ ಮೇಲಧಿಕಾರಿ ಜಾಗದಲ್ಲಿ ಬೇರೊಬ್ಬರನ್ನು ಕುಳ್ಳರಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ನಮ್ ಸಾಹೇಬ್ರು ಇದ್ದಾರೆ, ಅವ್ರಿಗೆ ಕೊಡಬೇಕು ಎಂದು ಹಣ ವಸೂಲಿ ಮಾಡಿದ್ದಾನೆ.

ಸ್ಥಳೀಯ ಕೆಲ ಜನರು ಅನುಮಾನಗೊಂಡು ಈ ಚಾಲಕನ ಕಳ್ಳಾಟವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸುತ್ತುವರಿದು ಪ್ರಶ್ನೆ ಮಾಡಿದ್ದಾರೆ.
ಇದರಿಂದ ತಬ್ಬಿಬ್ಬಾದ ಚಾಲಕ ನಮ್ ಸಾಹೇಬ್ರು ಕೋರ್ಟ್ ಗೆ ಹೋಗಿದ್ದಾರೆ, ಬರ್ತಾರೆ. ಅದಕ್ಕೆ ನಾವು ತಪಾಸಣೆ ಮಾಡುತ್ತಿದ್ದೇವೆ ಎಂದು
ಸಬೂಬು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾನೆ. ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಿದ್ದಂತೆ ಚಾಲಕ ಜೀಪ್ ತೆಗೆದುಕೊಂಡು ಅಲ್ಲಿಂದ ಪಲಾಯನ ಮಾಡಿದ್ದಾನೆ.
ಆರ್ ಟಿಒ ಚಾಲಕನ ಈ ವಸೂಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು, ಭಾರೀ ವೈರಲ್ ಆಗುತ್ತಿದೆ. ಆರ್ ಟಿಒ ಇಲಾಖೆಯ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ದ ಜಾಲತಾಣದಲ್ಲಿ ಜನರು ಆಕ್ರೋಶ ಹೊರ ಹಾಕಿದ್ದಾರೆ.