ವಿಜಯಸಾಕ್ಷಿ ಸುದ್ದಿ, ಹಾವೇರಿ
ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ, ಜನರು ಮಾತ್ರ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಹೀಗಾಗಿ ಮಹಿಳಾ ಎಎಸ್ ಐ ಒಬ್ಬರು ಹೀಗೆ ತಿರುಗಾಡುತ್ತಿದ್ದವರಿಗೆ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.
ಸರ್ಕಾರ ಹಾಗೂ ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಬೆಳಿಗ್ಗೆ 10ರ ವರೆಗೆ ಅವಕಾಶ ನೀಡಿದೆ. ಅದರೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದವರಿಗೆ ಮಹಿಳಾ ಎಎಸ್ ಐ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.
ಕಿವಿ ಹಿಡಿಸಿ ಇಪ್ಪತ್ತೈದು ಬಸ್ಕಿ ಹೊಡೆಸಿ ಹಂಸಭಾವಿ ಮಹಿಳಾ ಎಎಸ್ ಐ ಎಂ.ಎ. ಅಸಾದಿ ಶಿಕ್ಷೆ ನೀಡಿ, ಜನರಿಗೆ ಬುದ್ಧಿ ಹೇಳಿದ್ದಾರೆ. ಈ ಗ್ರಾಮದಲ್ಲಿ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಗೂ ರೈತರು ಜಮೀನಿಗೆ ಹೋಗಲು ಮಾತ್ರ ಬಿಡುತ್ತಿದ್ದಾರೆ. ಕೆಲವು ವಾಹನ ಸವಾರರಿಗೆ ದಂಡ ಹಾಕುತ್ತಿದ್ದಾರೆ. ಅಲ್ಲದೆ ಕೆಲವು ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.



