ಅನ್ಯ ಇಲಾಖಾಧಿಕಾರಿಗಳನ್ನು ತಹಶೀಲ್ದಾರ ಹುದ್ದೆಗೆ ನೇಮಿಸದಂತೆ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ರಾಜ್ಯದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ ಹುದ್ದೆಗೆ ನೇಮಕ ಮಾಡದಿರುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ  ಜಿಲ್ಲಾ ಕಂದಾಯ ನೌಕರರ ಸಂಘದಿಂದ  ಮನವಿ ಸಲ್ಲಿಸಲಾಯಿತು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ  ಸಚಿವ ಸಂಪುಟದ ಪ್ರಕರಣ ಸಂಖ್ಯೆ 161/2021 ದಿ: 26-4-2021 ರಂದು ತೀರ್ಮಾನಿಸಿದಂತೆ ಅನ್ಯ ಇಲಾಖಾಧಿಕಾರಿಗಳನ್ನು ತಹಶೀಲ್ದಾರ ಹುದ್ದೆಗೆ ನಿಯೋಜನೆ  ಹಾಗೂ ನೇಮಕ ಮಾಡಬಾರದೆಂದು ತಿಳಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಅಣ್ಣಿಗೇರಿ ಮಾತನಾಡಿ, ತಹಶೀಲ್ದಾರ ಹುದ್ದೆಯು ತಾಲೂಕಿನ ಮೆಜಿಸ್ಟ್ರಿಯಲ್ ಅಧಿಕಾರಿ ಹುದ್ದೆಯಾಗಿದ್ದು ಅತ್ಯಂತ ಜವಾಬ್ದಾರಿಯುತವಾಗಿರುತ್ತದೆ. ಖಾಲಿ ಇರುವ  ಶೇ.50 ರಷ್ಟು ಹುದ್ದೆಗಳನ್ನು ನೇಮಕಾತಿ ಮೂಲಕ ಹಾಗೂ 50 ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ನೇಮಿಸಿದರೆ ಕಂದಾಯ ನೌಕರರಿಗೆ ಮುಂಬಡ್ತಿಗೆ ಅನುಕೂಲವಾಗಲಿದೆ. ಬೇರೆ ಇಲಾಖಾಧಿಕಾರಿಗಳನ್ನು ನೇಮಕ ಮಾಡುವುದರಿಂದ ಸುಮಾರು 35 ರಿಂದ 40 ವರ್ಷ ಸೇವೆ ಸಲ್ಲಿಸಿದರೂ ಸಹ ಮುಂಬಡ್ತಿ ವಂಚಿತರಾಗುತ್ತಿದ್ದಾರೆ.  ಆದ್ದರಿಂದ ಬೇರೆ ಇಲಾಖೆಯಿಂದ ನಿಯೋಜನೆ ಮೇಲಿರುವ ತಹಶೀಲ್ದಾರರನ್ನು ಮಾತೃ ಇಲಾಖೆಗೆ ಬಿಡುಗಡೆ ಮಾಡಬೇಕು. ಹಾಗೂ ಇಲಾಖಾ ನೌಕರರಿಗೆ ಮುಂಬಡ್ತಿ ನೀಡುವ ಮೂಲಕ ತಹಶೀಲ್ದಾರ ಹುದ್ದೆಗೆ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಅನ್ಯ ಇಲಾಖೆಯಿಂದ ತರಬೇತಿ ಬರುವವರು ತಹಶೀಲ್ದಾರ ಹುದ್ದೆಗೆ ಮಾತ್ರ ಬರುತ್ತಿರುವುದು, ನೇಮಿಸುತ್ತಿರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿಯಾಗಿದೆ.  ದಯಮಾಡಿ ಅನ್ಯ ಇಲಾಖಾ ನೌಕರರನ್ನು ತಹಶೀಲ್ದಾರ ಹುದ್ದೆಗೆ ನೇಮಕ ಮಾಡದಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  

ಕಂದಾಯ ಇಲಾಖೆಯ ನೌಕರರುಗಳಾದ ಪಿ.ಸಿ. ಕಲಾಲ, ಜಯಲಕ್ಷ್ಮಿ ವಸ್ತ್ರದ, ವಿ.ಕೆ.ರೇವಣಕರ್, ಡಿ.ಟಿ. ವಾಲ್ಮೀಕಿ, ಎಂ.ಎಸ್. ಮೇಲ್ಮನಿ, ಎಸ್.ಎಂ. ಹಿರೇಮಠ, ಸಹನಾ ಹಂಜೆ, ಜಯಪ್ರಕಾಶ ಭಜಂತ್ರಿ ಸೇರಿದಂತೆ ಮತ್ತಿತರ ನೌಕರರು ಇದ್ದರು.


Spread the love

LEAVE A REPLY

Please enter your comment!
Please enter your name here