ಅನ್ ಲಾಕ್ ಜಾರಿ – ಬಸ್ ಸಂಚಾರಕ್ಕೆ ಅನುಮತಿ!

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಸರ್ಕಾರವು ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗ ಸೂಚಿ ನಿರ್ದೇಶನಗಳಂತೆ ಸೋಮವಾರ ಬೆಳಿಗ್ಗೆಯಿಂದ ಬಸ್ ಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ನಗರದ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣ , ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ, ತಡಸ ಸೇರಿದಂತೆ ಪ್ರಮುಖ ನಗರಗಳಿಗೆ ಬಸ್ ಸಂಚರಿಸಲಿವೆ. ನೆರೆಯ ಜಿಲ್ಲೆಗಳಾದ ಗದಗ, ಇಲಕಲ್, ಬಾಗಲಕೋಟೆ, ವಿಜಯಪುರ, ಹಾವೇರಿ, ದಾವಣಗೆರೆ,ಶಿರಸಿ, ಬೆಳಗಾವಿ ಮತ್ತಿತರ ಸ್ಥಳಗಳಿಗೆ ಬಸ್ ಸಂಚಾರ ಆರಂಭಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ದೂರದ ಊರುಗಳಿಗೆ ವಿಸ್ತರಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸೋಂಕಿನ ಹಿನ್ನೆಲೆಯಲ್ಲಿ ಬಸ್, ಡಿಪೋ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿದೆ. ಲಸಿಕೆ ಪಡೆದುಕೊಂಡಿರುವ ಸಿಬ್ಬಂದಿಗಳನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ವೈಯಕ್ತಿಕ ಬಳಕೆಗೆ ಸ್ಯಾನಿಟೈಸರ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಶೇ. 50ರಷ್ಟು ಸಾಮರ್ಥ್ಯದಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ. ನಿಂತು ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಬೆಳಿಗ್ಗೆಯಿಂದ ಸಂಜೆ 7ರ ವರೆಗೆ ಬಸ್ ಗಳು ಸಂಚರಿಸಲಿವೆ. ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2216 ನೌಕರಸ್ಥರಿದ್ದಾರೆ. ಈ ಪೈಕಿ 1500ಕ್ಕೂ ಹೆಚ್ಚು ಚಾಲಕರು ಹಾಗೂ ನಿರ್ವಾಹಕರಿದ್ದಾರೆ. ಶೇ. 97ರಷ್ಟು ಸಿಬ್ಬಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಕೆಲವರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನುಳಿದವರು ಕೂಡಲೆ ಲಸಿಕೆ ಪಡೆದುಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಪೂರ್ವದಲ್ಲಿ ಗೋವಾ, ಮಹಾರಾಷ್ಟ್ರ , ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಪಕ್ಕದ ರಾಜ್ಯಗಳಿಗೆ ವೊಲ್ವೊ, ಸ್ಲೀಪರ್ , ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ ಹುಬ್ಬಳ್ಳಿ ಯಿಂದ 65 ಬಸ್ ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದವು. ಸರ್ಕಾರದ ಅನುಮತಿ ಬಂದ ನಂತರದಲ್ಲಿ ಈ ಬಸ್ ಗಳ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿನ ಹಳೆಯ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿಯ ಪ್ರಯುಕ್ತ ಬಸ್ ನಿಲ್ದಾಣದ ಈಗಿರುವ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹಳೆ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗರ ಸಂಚರಿಸುತ್ತಿದ್ದ ಎಲ್ಲಾ ಬಸ್ಸುಗಳನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.
ಅದರಂತೆ ಕುಂದಗೋಳ, ಸಂಶಿ, ಶಿರಹಟ್ಟಿ, ಹುಲಗೂರ, ಕಲಘಟಗಿ, ತಡಸ, ನವಲಗುಂದ, ಅಣ್ಣಿಗೇರಿ ಮತ್ತಿತರ ಗ್ರಾಮೀಣ ಸ್ಥಳಗಳಿಗೆ ಹೋಗವ ಎಲ್ಲಾ ಬಸ್ ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.


Spread the love

LEAVE A REPLY

Please enter your comment!
Please enter your name here