- ದೇಶದ ಪ್ರಧಾನಿ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನ
ವಿಜಯಸಾಕ್ಷಿ ಸುದ್ದಿ, ನವದೆಹಲಿ
ತಿಂಗಳ ಕಾಲದ ಸುದೀರ್ಘ ಸಂಘರ್ಷದ ಬಳಿಕ ಕೊನೆಗೂ ತಾಲಿಬಾನ್ ಉಗ್ರರು ಅಪಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದ್ದು, ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ತಾಲಿಬಾನ್ ಉಗ್ರರು ಕಾಬೂಲ್ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಅಪಘಾನಿಸ್ಥಾನ್ ಪ್ರಧಾನಿ ಅಶ್ರಫ್ ಘನಿ ಹಾಗೂ ಸೇನೆಯ ಪ್ರಮುಖರು
ದೇಶದಿಂದ ಪಲಾಯನಗೈದಿದ್ದಾರೆ.
ಆಗಸ್ಟ್ ಮೊದಲ ವಾರದಿಂದ ದೇಶದ ಒಂದೊಂದೇ ಪ್ರಾಂತೀಯ ರಾಜಧಾನಿಗಳನ್ನು ವಶಕ್ಕೆ ಪಡೆಯುತ್ತಾ ಬಂದಿದ್ದ ತಾಲಿಬಾನ್ ಉಗ್ರರು ಎಲ್ಲ ದೊಡ್ಡ ಪ್ರಾಂತಗಳನ್ನು ವಶಕ್ಕೆ ಪಡೆದು ದೇಶದ ರಾಜಧಾನಿ ಕಾಬೂಲ್ ಬಾಗಿಲಿಗೆ ಬಂದು ನಿಂತಿದ್ದರು.
ಕಾಬೂಲ್ ವಶಪಡಿಸಿಕೊಳ್ಳಲು ಭಾರಿ ಸಂಘರ್ಷ ಏರ್ಪಡಲಿದೆ ಎಂದು ಭಾವಿಸಿದ್ದ ವಿಶ್ವ ಸಮುದಾಯದ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಅಪ್ಘಾನ್ ಸೇನೆ ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಿದೆ.
ಸುಮಾರು 3 ಲಕ್ಷದಷ್ಟು ಸೇನಾ ಬಲ ಹಾಗೂ ಆಧುನಿಕ ಶಸ್ತ್ರಾಸ್ತ್ರ, ವಾಯುಸೇನೆ, ಯುದ್ಧವಿಮಾನ ಹೊಂದಿದ್ದ ಅಪಘಾನ್ ಸೇನೆ ಕೇವಲ ಹತ್ತು ಸಾವಿರದಷ್ಟಿದ್ದ ತಾಲಿಬಾನ್ ಉಗ್ರರ ಎದುರು ಮಂಡಿಯೂರಿ ಅಚ್ಚರಿ ಮೂಡಿಸಿದೆ.
ಕಾಬೂಲ್ ತಾಲಿಬಾನ್ ವಶಕ್ಕೆ ಪಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅಪ್ಘನ್ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಗಿದೆ.
ತಾಲಿಬಾನ್ ಉಗ್ರರಿಗೆ ಹೆದರಿ ಜನರು ವಾಹನ, ಕಾಲ್ನಡಿಗೆ ಮೂಲಕ ಪಲಾಯನ ಮಾಡಲು ಆರಂಭಿಸಿದ್ದು, ರಸ್ತೆಗಳೆಲ್ಲ ಜಾಮ್ ಆಗಿವೆ.
ಈ ಮಧ್ಯೆ ತಾಲಿಬಾನ್ ಆಡಳಿತ ಜನರ ಪಲಾಯನ ತಡೆಯಲು ಕರ್ಫ್ಯೂ ಜಾರಿಗೊಳಿಸಿದೆ.
ಭಾರತ ಸರ್ಕಾರ ಅಪಘಾನಿಸ್ತಾನದಲ್ಲಿರುವ ರಾಜತಾಂತ್ರಿಕರು ಹಾಗೂ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ವಿಶೇಷ ವಿಮಾನಗಳು ಕಾಬೂಲ್ ತಲುಪಿವೆ.