ವಿಜಯಸಾಕ್ಷಿ ಸುದ್ದಿ, ಉಪ್ಪಿನಂಗಡಿ
ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಕೊಟ್ಟಿಗೆಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿ, ರಾದ್ಧಾಂತ ಸೃಷ್ಟಿಸಿರುವ ಘಟನೆ ನಡೆದಿದೆ.
ಈ ಘಟನೆ 34 ನೆಕ್ಕಿಲಾಡಿಯಲ್ಲಿ ನಡೆದಿದೆ. ದರ್ಬೆಯ ಮಂಚು ನಾಯ್ಕ ಎಂಬುವವರ ಮನೆಗೆ ಏಕಾಏಕಿ ನುಗ್ಗಲು ಯುವಕ ಯತ್ನಿಸಿದ್ದಾನೆ. ಕೂಡಲೇ ಮನೆಯವರು ಬಾಗಿಲು ಹಾಕಿ ತಡೆಯಲು ಯತ್ನಿಸಿದ್ದಾರೆ. ಆಗ ಅಲ್ಲಿದ ಓಡಿ ಹೋಗಿ ಅವರ ಮನೆಯ ಹೊರಗೆ ಇದ್ದ ಕೊಟ್ಟಿಗೆಗೆ ನುಗ್ಗಿ, ಅಲ್ಲಿನ ಬಾಗಿಲು, ಕಿಟಕಿಗಳನ್ನೆಲ್ಲ ಮುಚ್ಚಿ ಒಳಗಿನಿಂದ ಲಾಕ್ ಮಾಡಿ ಬೇರೆಯವರೊಂದಿಗೆ ಫೋನ್ ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಾನೆ.
ಈ ವ್ಯಕ್ತಿಯ ವರ್ತನೆಯಿಂದ ಗಾಬರಿಗೊಂಡ ಕುಟುಂಬಸ್ಥರು, ನೆರೆ ಹೊರೆಯವರನ್ನು ಕರೆದಿದ್ದಾರೆ. ಕಳ್ಳನಾಗಿರಬಹುದೆಂದು ಭಾವಿಸಿ, ಆತ ನುಗ್ಗಿದ ಕೊಠಡಿಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದರೆ, ನೆರೆ ಹೊರೆಯವರು ಹೆಚ್ಚಾಗಿದ್ದರಿಂದಾಗಿ ಈ ವ್ಯಕ್ತಿಯನ್ನು ಮಾತನಾಡಿಸಲು ಬಾಗಿಲು ತೆರೆದಿದ್ದಾರೆ. ಅಷ್ಟರಲ್ಲಿ ಆತ, ತನ್ನ ಕೈಯಲ್ಲಿದ್ದ ಶಾಲಿನಿಂದ ಕೊಠಡಿಯ ಛಾವಣಿಗೆ ನೇಣು ಹಾಕಿಕೊಂಡು ಅದರಲ್ಲಿ ತನ್ನ ಕುತ್ತಿಗೆಯನ್ನು ಬಿಗಿದು ನೇತಾಡುತ್ತಿದ್ದ. ಕೂಡಲೇ ಸ್ಥಳೀಯರು ಸೇರಿ ಆತನನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಆ ವ್ಯಕ್ತಿ ಬದುಕುಳಿದಿದ್ದಾನೆ.
ಪೊಲೀಸರು ಆಗಮಿಸಿ, ಆತನನ್ನು ವಿಚಾರಿಸಿದಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ. ಈ ವ್ಯಕ್ತಿ ಮಂಜಲಪಡ್ಪು ಸಮೀಪದ ಚೇವುರೆಯ ರಮೇಶ (28) ಎಂದು ತಿಳಿದು ಬಂದಿದೆ. ತನ್ನು ಕುಟುಂಬಸ್ಥರೊಂದಿಗೆ ಈತ ಸಂಬಂಧಿಕರ ಮನೆಗೆ ಬಂದಿದ್ದನಂತೆ. ಆ ನಂತರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಯಿಸಿದಾಗ, ಈತ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ. ಕುಮಾರಧಾರ ನದಿ ಸೇರಿದಂತೆ ಹಲವು ಕಡೆ ಈತನಿಗಾಗಿ ಹುಡುಕಾಡಿದ್ದೆವು ಎಂದು ಹೇಳಿದ್ದಾರೆ.