ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಖಾನಾಪುರ ಪಟ್ಟಣದ ಅರ್ಬಾಜ್ ಎಂಬ ಯುವಕನ ಬರ್ಬರ್ ಹತ್ಯೆ ಪ್ರಕರಣ ಬೇಧಿಸಿರುವ ಪೊಲೀಸರು 12 ಆರೋಪಿಗಳನ್ನು ಬಂಧಿಸಿದ್ದಾರೆ.
ಕುಂಬಾರ್, ಸುಶೀಲ್ ಕುಂಬಾರ್, ಗಣಪತಿ ಗೊಂದಳಿ, ಕುತುಬುದ್ದೀನ್ ಬೇಪಾರಿ, ಮಾರುತಿ ಗೊಂದಳಿ, ಪ್ರಶಾಂತ ಪಾಟೀಲ್, ಮಂಜು ಗೊಂದಳಿ, ಪ್ರವೀಣ್ ಪೂಜಾರಿ, ಶ್ರೀಧರ ಡೋಣಿ ಬಂಧಿತರು.
ಅನ್ಯ ಕೋಮಿನ ಯುವಕನನ್ನು ಮಗಳು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆಗೆ ಪೋಷಕರು ಸುಫಾರಿ ನೀಡಿ ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಸೆಪ್ಟೆಂಬರ್ 28ರಂದು ಅರ್ಬಾಜ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಎಸೆಯಲಾಗಿತ್ತು. ಈ ಭೀಕರ ಹತ್ಯೆ ರಾಜ್ಯಾದ್ಯಂತ ಸದ್ದು ಮಾಡಿದ್ದರಿಂದ ಪೊಲೀಸರಿಗೆ ಪ್ರಕರಣ ಬೇಧಿಸುವುದು ಸವಾಲಾಗಿತ್ತು.
ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಅ.4ರಂದು ಖಾನಾಪುರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಪ್ರಕರಣ ಬೇಧಿಸಲು ಎಸ್ಪಿ ಲಕ್ಷ್ಮಣ ನಿಂಬರಗಿ ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.
ಪ್ರಕರಣದ ಬೆನ್ನು ಹತ್ತಿದ ಖಾನಾಪುರ ಪೊಲೀಸರು ಮೊದಲು ಪುಂಡಲೀಕ ಮುತಗೇಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೊಲೆಯ ಸಂಚು ಬಯಲಾಗಿದೆ.
ಅರ್ಬಾಜ್ ಹಾಗೂ ಶ್ವೇತಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಶ್ವೇತಾ ಪೋಷಕರಿಗೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತು. ಮಗಳನ್ನು ಅರ್ಬಾಜ್ ನಿಂದ ದೂರ ಮಾಡಿ ಬೇರೆ ಮದುವೆ ಮಾಡಲು ನಿರ್ಧರಿಸಿದ್ದರು. ಅರ್ಬಾಜ್ ನಿಂದ ಮಗಳನ್ನು ದೂರ ಮಾಡಲು ತಂದೆ ಈರಪ್ಪ ಕಂಬಾರ್, ತಾಯಿ ಸುಶೀಲಾ ಕಂಬಾರ್ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯ ತಾಲೂಕು ಅಧ್ಯಕ್ಷ ಪುಂಡಲೀಕ್ ಮಹರಾಜ್ ಹಾಗೂ ಬಿರ್ಜೆ ಮೊರೆ ಹೋಗಿದ್ದರು.
ಈ ಇಬ್ಬರು ಅರ್ಬಾಜ್ ಗೆ ಬೆದರಿಕೆ ಹಾಕಿದ್ದರು. ಸೆಪ್ಟೆಂಬರ್ 26 ರಂದು ಪ್ರೀತಿ, ಪ್ರೇಮ ಸಂಬಂಧ ರಾಜೀ ಪಂಚಾಯತಿ ನಡೆದಿತ್ತು. ಬಳಿಕವೂ ಅರ್ಬಾಜ್ ಹಾಗೂ ಶ್ವೇತಾ ಫೋನ್ ನಲ್ಲಿ ಸಂಪರ್ಕದಲ್ಲಿದ್ದರು. ಇದರಿಂದ ರೋಸಿ ಹೋದ ಪೋಷಕರು ಯುವಕನ ಕೊಲೆಗೆ ಸುಫಾರಿ ನೀಡಿದ್ದರು.
ಸೆಪ್ಟೆಂಬರ್ 28 ರಂದು ಅರ್ಬಾಜ್ ನನ್ನು ಖಾನಾಪುರಕ್ಕೆ ಕರೆಸಿದ ಆರೋಪಿಗಳು, ಅರ್ಬಾಜ್ ಮೇಲೆ ಮಾರಣಾಂತಿಕ ಮೇಲೆ ಹಲ್ಲೆ ಮಾಡಿ ರುಂಡ, ಕೈ ಕಾಲು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದರು. ಪ್ರಕರಣದ ದಿಕ್ಕು ತಪ್ಪಿಸಲು ಅರ್ಬಾಜ್ ಶವ ರೈಲು ಹಳಿ ಮೇಲೆ ಬಿಸಾಡಿದ್ದರು.
ಅರ್ಬಾಜ್ ಮಾತುಕತೆಗೆ ಕರೆಸಿದ್ದು ಕುತುಬುದ್ದೀನ್ ಬೇಪಾರಿಯನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.