ವಿಜಯಸಾಕ್ಷಿ ಸುದ್ದಿ, ಗದಗ
ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಲಾಕ್‌ಡೌನ್ ಜಾರಿ ಮಾಡಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಅದರಲ್ಲೂ ನಿರ್ಗತಿಕರು, ಅಸಹಾಯಕ ಕುಟುಂಬಗಳ ಪರಿಸ್ಥಿತಿ ಹೇಳತೀರದು.

ಇಂತಹ ಅಸಹಾಯಕ ಸ್ಥಿತಿಯಲ್ಲಿ ಗದಗ ಜಿಲ್ಲೆಯ ಪೊಲೀಸರು ಸಮೀಕ್ಷೆ ನಡೆಸಿ, ಅಗತ್ಯವುಳ್ಳ ಕುಟುಂಬಗಳನ್ನು ಗುರುತಿಸಿ, ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡಿ, ಮಾನವೀಯತೆ ಮೆರೆದಿದ್ದಾರೆ.

ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 30ಕ್ಕೂ ಹೆಚ್ಚು ಸಮಾನ ಮನಸ್ಕ ಪೊಲೀಸರು ಆಹಾರ ಧಾನ್ಯಗಳು ಹಾಗೂ ಅಗತ್ಯ ವಸ್ತುಗಳ ಕಿಟ್‌ಗಳನ್ನು ಅಗತ್ಯವುಳ್ಳ ಬಡ ಕುಟುಂಬಗಳಿಗೆ ವಿತರಿಸಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಹಿಂದುಳಿದ ಪ್ರದೇಶಗಳಲ್ಲಿ ಸಂಚರಿಸಿದ ಸಶಸ್ತ್ರ ಮೀಸಲು ಪಡೆಯ ಪೊಲೀಸರು ವಿಧವೆಯರು, ದುಡಿಯಲು ಶಕ್ತಿಯಿಲ್ಲದ ವ್ಯಕ್ತಿಗಳಿರುವ ಸುಮಾರು 55 ಕುಟುಂಬಗಳ ಸಮೀಕ್ಷೆ ನಡೆಸಿ, ಆಹಾರದ ಕಿಟ್ ವಿತರಿಸಿದ್ದಾರೆ.

ಅಡುಗೆ ಎಣ್ಣೆ, ರವಾ, ಹೆಸರು ಕಾಳು, ಸಾಬೂನು, ಸಕ್ಕರೆ, ಚಹಾಪುಡಿ, ಬೆಲ್ಲ ಮುಂತಾದ ದಿನಬಳಕೆಯ ವಸ್ತುಗಳನ್ನು ಖರೀದಿಸಿ, ಪ್ಯಾಕ್ ಮಾಡಿ, ಈ ಕುಟುಂಬಗಳಿರುವಲ್ಲಿಗೆ ತೆರಳಿದ ಪೊಲೀಸರು, ತಾವೇ ಹಂಚಿಕೆ ಮಾಡಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐಗಳಾದ ಎ.ಎಂ. ಚಾಂದ್ ಖಾನ್, ಜಿ.ಕೆ. ಖಾಜಿ, ಮುಖ್ಯ ಪೇದೆಗಳಾದ ಹಸನ ಸಾಬ್ ಉಮಚಗಿ, ಎಂ.ಕೆ. ಕಾತರಕಿ, ದಾವಲ್ ಕಲೆಗಾರ, ಎ.ಎಂ. ಮುಲ್ಲಾ ಮುಂತಾದ ಸಮಾನ ಮನಸ್ಕ
ಗೆಳೆಯರು ತಾವೇ ಹಣ ಹೊಂದಿಸಿ, ಬಡವರಿಗೆ ಅಗತ್ಯಾನುಸಾರ ಸಹಾಯ ಮಾಡಬೇಕೆಂದು ನಿರ್ಧರಿಸಿ, ಈ ಕಾರ್ಯ ಕೈಗೊಂಡಿದ್ದು, ಜಿಲ್ಲಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.