ಆಚಾರ್‌ರದ್ದು ಬಾಲಿಶತನ, ರಾಯರಡ್ಡಿಯದ್ದು ಅಪ್ರಬುದ್ಧತೆ!!

0
Spread the love

ಕೆರೆ “ಮರೆ” ಜಗಳ

Advertisement

-ಯಲಬುರ್ಗಾ ಕ್ಷೇತ್ರದ ಹಾಲಿ-ಮಾಜಿ ಸಚಿವರ ಜಗಳ್‌ಬಂಧಿ

-ಈಗಿನಿಂದಲೇ ಮುಂದಿನ ಚುನಾವಣೆಯ ಟೀಸರ್ ಶುರು

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ
ಕೊಪ್ಪಳ: ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ಕಾಲು ವರ್ಷ ಬಾಕಿ ಇದೆ. ಆದರೆ ಯಲಬುರ್ಗಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಸಚಿವರು ಚುನಾವಣೆಯ ಟೀಸರ್ ಆರಂಭಿಸಿದ್ದಾರೆ. ಹಾಲಿ ಸಚಿವ ಹಾಲಪ್ಪ ಆಚಾರ್ ಸರಕಾರದ ವಿವಿಧ ಕಾರ್ಯಗಳ ಮೂಲಕ ಕಾಂಗ್ರೆಸ್ ಟೀಕಿಸುತ್ತಾ ಪರೋಕ್ಷ ಪ್ರಚಾರ ಆರಂಭಿಸಿದ್ದರೆ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆ, ಕೃಷ್ಣಾ ನದಿ‌ ನೀರಿನ ವಿತರಣೆಯ ವಿಚಾರವನ್ನು ಕೈಗೆತ್ತಿಕೊಂಡು ಕೆಸೆರೆರಚಾಟ ಆರಂಭಿಸಲಾಗಿದೆ.

ನಾಪತ್ತೆಯಾಗಿದ್ದ ರಾಯರಡ್ಡಿ ಪ್ರತ್ಯಕ್ಷ!
2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಅವರನ್ನು ಕ್ಷೇತ್ರದ ಜನ ಕಾಣಬೇಕೆಂದರೆ ಧಾರವಾಡ, ಬೆಂಗಳೂರು ಇಲ್ಲವೇ ದೆಹಲಿಗೆ ತೆರಳಬೇಕಿತ್ತು. ಹಾಗಾಗಿ ರಾಯರಡ್ಡಿ ಬಹುತೇಕ ಜನಸಂಪರ್ಕದಿಂದ ದೂರವೇ ಉಳಿದಿದ್ದರು. ಗ್ರಾಪಂ ಚುನಾವಣೆ ಸೇರಿದಂತೆ ಪಕ್ಷದ ಇತರೆ ಕಾರ್ಯಕ್ರಮಗಳಲ್ಲೂ ಅವರ ಹಾಜರಾತಿ ಅಷ್ಟಕ್ಕಷ್ಟೇ. ಹೆಚ್ಚು ಕಡಿಮೆ ನಾಪತ್ತೆಯಾಗಿದ್ದ ಮಾಜಿ ಸಚಿವ ರಾಯರಡ್ಡಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಇನ್ನು ಮೇಲೆ ಆಗಾಗ ಕಾಣ್ತಾ‌ ಇರ‌್ತಿನಿ ಅಂತಲೂ ಮಾಧ್ಯಮದವರಿಗೆ ರಾಯರಡ್ಡಿ ಹೇಳಿರೋದನ್ನ ಗಮನಿಸಿದರೆ ಈಗಿನಿಂದಲೇ ಚುನಾವಣಾ ತಯಾರಿ ಶುರು ಎಂತಲೂ, ಅದಕ್ಕಾಗಿ ಈ ಟ್ರೇಲರ್ ಅಂದಂತಿತ್ತು.

ಏನದು ಟ್ರೇಲರ್? ಜಿಲ್ಲೆಯ ನೀರಾವರಿ ಯೋಜನೆಗಳ ವಿಚಾರವನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಹಾಲಪ್ಪ ಆಚಾರ್ ಅವರಿಗೆ ಬುದ್ಧಿ ಇಲ್ಲ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸೋದೇ ರಾಯರಡ್ಡಿ ತಂತ್ರಗಾರಿಕೆ ಮತ್ತು ಚುನಾವಣಾ ಪ್ರಚಾರದ ಟ್ರೇಲರ್. ಕೆರೆ ತುಂಬಿಸುವ ಯೋಜನೆಗಳಾಗಲಿ, ಕೃಷ್ಣಾ ನದಿ‌ ನೀರಿನ ಹಂಚಿಕೆಯಾಗಲಿ, ನೀರಾವರಿ ಯೋಜನೆಗಳಾಗಲಿ ಏಕ ವ್ಯಕ್ತಿಯಿಂದ ಸಾಧ್ಯವಿಲ್ಲ. ಹಾಗೊಂದು ವೇಳೆ ನನ್ನಿಂದಲೇ ಆಯ್ತು ಅನ್ನೋದು ಮೂರ್ಖತನ. ಯೋಜನೆಗಳು ಸಾಕಾರಗೊಳ್ಳೋದು ಏಕ ವ್ಯಕ್ತಿ ಅಥವಾ ಏಕ ಪಕ್ಷದಿಂದ ಅಲ್ಲ, ಆಡಳಿತಾರೂಢ ಸರಕಾರದಿಂದ ಯೋಜನೆಗಳ ಅನುಷ್ಠಾನ ಸಾಧ್ಯ. ಇದು ಬಿಜೆಪಿಯದ್ದಷ್ಟೇ ಸಾಧನೆಯಲ್ಲ, ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಿದ್ದರಾಮಯ್ಯ ಹಾಗೂ ಅವರ ಸರಕಾರ‌ ನಯಾಪೈಸೆ ಕೊಟ್ಟಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಪ್ರತಿಪಾದಿಸಿದ ರಾಯರಡ್ಡಿ 2013-14ನೇ ಸಾಲಿನಿಂದ 2018-19ರವರೆಗೆ ಬಿಡುಗಡೆಯಾದ ಅನುದಾನಗಳ ವಿವರ ನೀಡಿದರು.

ಶಾಸಕರಾದವರಿಗೆ ತಿಳಿವಳಿಕೆ ಇಲ್ಲ ಎಂದು ಭಾಗಶಃ ಒಪ್ಪಬಹುದು.‌ ಇದುವರೆಗೂ ಶಾಸಕರಾಗಿದ್ದ ಹಾಲಪ್ಪ ಆಚಾರ್ ಅವರು ಕಾಂಗ್ರೆಸ್ ವಿರುದ್ಧ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದಾಗ ಅವರಿಗೆ ತಿಳಿವಳಿಕೆ ಇಲ್ಲ ಎಂದು ಉದಾಸೀನ ಮಾಡುತ್ತಿದ್ದೆ. ಆದರೆ ಆಚಾರ್ ಈಗ ಸರಕಾರದ ಮೂರು‌ ಇಲಾಖೆಗಳನ್ನು ನಿಭಾಯಿಸುವ ಮಂತ್ರಿಯಾಗಿದ್ದುಕೊಂಡು ಚಿಕ್ಕಮಕ್ಕಳ ಥರಾ ಬಾಲಿಶವಾಗಿ ಮಾತನಾಡುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅಪ್ರಬುದ್ಧರ ಹೇಳಿಕೆಗೆ ಕಿವಿಗೊಡಬೇಕಾದ ಅಗತ್ಯ ಇಲ್ಲ
ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಹಾಲಪ್ಪ ಆಚಾರ್, ಅಪ್ರಬುದ್ಧವಾಗಿ ಮಾತನಾಡುವವರಿಗೆ ಏನೆಂದು ಪ್ರತಿಕ್ರಿಯೆ‌ ನೀಡಲಿ? ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಜನಪರವಾಗಿ ಸ್ಪಂದಿಸಿದ್ದು ನಮ್ಮ ಬಿಜೆಪಿ ಸರಕಾರ. ಯಲಬುರ್ಗಾ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ತಂದದ್ದು ನಾನೇ ಎಂದು ಈಗಲೂ ಹೇಳಿಕೊಳ್ಳುತ್ತೇನೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಇತ್ತು, ರಾಯರಡ್ಡಿಯವರೂ ಮಂತ್ರಿಯಾಗಿದ್ದರು. ನೀರಾವರಿ ಯೋಜನೆ ವಿಚಾರದಲ್ಲಿ ಅವರು ಕಿತ್ತು ಗುಡ್ಡೆ ಹಾಕಿರೋದು ಕ್ಷೇತ್ರದ ಜನರಿಗೆ ಗೊತ್ತಿದೆ. ರಾಜಕೀಯವಾಗಿ ಸಾಕಷ್ಟು ಅನುಭವ ಇದ್ದರೂ ರಾಯರಡ್ಡಿಯವರು ಅಪ್ರಬುದ್ಧನಂತೆ ಮಾತನಾಡುವುದು ಶೋಭೆಯಲ್ಲ. ನೀರಾವರಿ ವಿಚಾರಗಳಲ್ಲಿ ರಾಜಕಾರಣ ಬೆರೆಸಬಾರದು ಎಂದು ತೀಕ್ಷ್ಣವಾಗಿ ತಿವಿದರು.

ಒಟ್ಟಾರೆಯಾಗಿ ಮುಂಬರುವ ಚುನಾವಣೆಗೆ ಯಲಬುರ್ಗಾ ಕ್ಷೇತ್ರದಲ್ಲಿ ಈಗಿನಿಂದಲೇ ಸಿದ್ಧತೆ ಶುರುವಾದಂತೆ‌ ಕಾಣಿಸುತ್ತಿದೆ. ಜೊತೆಗೆ ಕನಕಗಿರಿ ಕ್ಷೇತ್ರದಲ್ಲೂ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಬಸವರಾಜ ದಢೇಸೂಗುರು ಮಧ್ಯೆ ಪ್ರಚಾರ-ಅಪಪ್ರಚಾರದ ಪೈಪೋಟಿ ಶುರುವಾಗಿದ್ದು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಮಾತಿದೆ. ಗಂಗಾವತಿ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ರಾಜಕೀಯ ಚಟುವಟಿಕೆ ಗರಿಗೆದರಿಲ್ಲ


Spread the love

LEAVE A REPLY

Please enter your comment!
Please enter your name here