ವಿಜಯಸಾಕ್ಷಿ ಸುದ್ದಿ, ಕಾರವಾರ
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೋ ಕಾರಣವಿರಬಹದು. ಅದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಮತ್ತು ಎಂಎಲ್ ಸಿಗೆ ಯಾವುದೋ ಒಂದು ವೈಯಕ್ತಿಕ ರಹಸ್ಯ ವಿಡಿಯೋ ಕೊಟ್ಟ ಮಾಹಿತಿ ಎರಡು ತಿಂಗಳ ಹಿಂದಿತ್ತು. ಇವರಿಬ್ಬರೂ ಸೇರಿ ಮುಖ್ಯಮಂತ್ರಿ ಹಾಗೂ ಅವರು ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಕೇಳಿದ್ದೆ. ಆದರೆ, ಇದರ ಸತ್ಯಾಂಶ ಗೊತ್ತಿಲ್ಲ. ಅದೇ ವಿಚಾರವಾಗಿ ಬೇಸರಗೊಂಡು ಸಂತೋಷ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಏನೋ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು. ಕಟೀಲ್ ಗೆ ಅಲ್ಪಸ್ವಲ್ಪ ಜ್ಞಾನವಿದೆ ಎಂದುಕೊಂಡಿದ್ದೆ. ಅವರು ಜವಾಬ್ದಾರಿ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಕಳಂಕ ತರುವ ಹೇಳಿಕೆ ನೀಡದೆ ಗೌರವದಿಂದ ನಡೆದುಕೊಳ್ಳಬೇಕು ಎಂದರು.
ನಾನು ಕೂಡಾ ಸಿದ್ದರಾಮಯ್ಯ ಸರ್ಕಾರಲ್ಲಿದ್ದೆ. ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದಾರೆ ಎಂದಾದರೆ ಎಫ್ಐಆರ್ ಏಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದರು ಎಂಬ ನಳೀನ್ ಕುಮಾರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.