ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಹಿಳಾ ಶಕ್ತಿ ಮಹಾನ್ ಶಕ್ತಿಯಾಗಿದ್ದು, ಮಹಿಳೆಯ ಛಲ, ಹೋರಾಟ ಆಕೆಯ ಬದುಕನ್ನು ಉನ್ನತಕ್ಕೇರಿಸಿವೆ ಎಂದು ಗದಗ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ ಅಭಿಪ್ರಾಯಪಟ್ಟರು.
ಸೋಮವಾರ ಬೆಟಗೇರಿ ಅಂಬೇಡ್ಕರ್ ನಗರದ ಬಾಲಾಜಿ ಉದ್ಯಾನವನದಲ್ಲಿ ಗದುಗಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಏರ್ಪಡಿಸಿದ್ದ ಮಹಿಳಾ ಜಾಗೃತಿ ಯೋಜನೆಯಡಿ ಕುಟುಂಬದ ಆರೋಗ್ಯದಲ್ಲಿ ಪೌಷ್ಟಿಕ ಆಹಾರದ ಪಾತ್ರ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಮಹಿಳೆ, ಸಮಾಜವನ್ನೂ ಪ್ರಗತಿಪಥದೆಡೆಗೆ ಸಾಗಿಸುವಲ್ಲಿ ಮುಂಚೂಣಿಯಲ್ಲಿದ್ದಾಳೆ ಎಂಬುದು ಇತಿಹಾಸ ಹಾಗೂ ರಾಜಕೀಯ ವಿದ್ಯಮಾನಗಳಿಂದ ನಿರೂಪಿತವಾಗಿದೆ. ಮಹಿಳೆಯನ್ನು ಭೂದೇವಿಗೆ ಹೊಲಿಕೆ ಮಾಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಭೂಮಿ ತೂಕಕ್ಕೆ ಹೋಲಿಕೆ ಮಾಡಲಾಗಿದೆ. ಆರೋಗ್ಯಕರ ಕುಟುಂಬ, ಸಮಾಜ ನಿರ್ಮಾಣದಲ್ಲಿ ಆರೋಗ್ಯಕರ ಆಹಾರವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.
ಕೊರೊನಾ ಸೋಂಕಿನಿಂದಾಗಿ ಮಾನವ ಸಂಕುಲಕ್ಕೆ ತೀವ್ರ ಪೆಟ್ಟು ಬಿದ್ದಿದೆ, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರಜ್ಞಾವಂತರಾದ ನಾವೆಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬ, ಪರಿವಾರದ ಕಾಳಜಿಯಿಂದ ಮಾಸ್ಕ್, ಸ್ಯಾನಿಟೈಜರ್ ಬಳಕೆಗೆ ಜ್ಞಾಪಿಸುವದಲ್ಲದೆ, ಬಿಸಿ-ಪೌಷ್ಟಿಕ ಆಹಾರ, ಪೇಯಗಳನ್ನು ಸಿದ್ಧಪಡಿಸಿ ಕುಟುಂಬದ ಆರೋಗ್ಯವನ್ನು ಮಹಿಳೆಯರೇ ಕಾಪಾಡುತ್ತಿದ್ದಾರೆ ಎಂದರು.
ಸಂಸ್ಥೆಯ ಯೋಜನಾ ನಿರ್ದೇಶಕ ಶಿವಾನಂದ ಆಚಾರ್ಯ ಮಾತನಾಡಿ, ಮಹಿಳೆಯರದು ಲೆಕ್ಕಾಚಾರದ ಬದುಕು. ಎಲ್ಲ ರೀತಿಯ ಸಮತೋಲನ ಕಾಯ್ದುಕೊಂಡು ಕುಟುಂಬ ಹಾಗೂ ಸಮಾಜವನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಹಿರಿದಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಒಕ್ಕೂಟದ ಅಧ್ಯಕ್ಷೆ ವೀನಾ ಕಬ್ಬಿಣದ, ಮಹಿಳೆಯರು ಸಂಘಟಿತರಾಗುವ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ಕುಟುಂಬಕ್ಕೆ ನೆರವಾಗಬೇಕು. ಅಂದಾಗ ಕುಟುಂಬ ಆರ್ಥಿಕವಾಗಿ ಇನ್ನಷ್ಟು ಸದೃಢತೆ ಪಡೆಯುವುದು ಎಂದರು.
ಸವಿತಾ ಕುಲಕರ್ಣಿ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಈಶ್ವರ ಸ್ವಾಗತಿಸಿ ನಿರೂಪಿಸಿದರು. ದೀಪಾ ಅಂಗಡಿ ವಂದಿಸಿದರು. ಅನಸೂಯಾ ಶೀಲವಂತ, ಪಾರ್ವತಿ ಪಿರಂಗಿ, ಜಯಶ್ರೀ ಕಬ್ಬಿಣದ, ಖೈರೂನಾ ಬೇಲೇರಿ, ಶ್ರವಂತಿ ಗಾರ್ಗಿ, ಸವಿತಾ ನಾಗಾವಿ, ಕವಿತಾ ಶಿರಹಟ್ಟಿ, ರೇಶ್ಮಾ ಕಲಾಲ, ಸಹನಾ ಅಣ್ಣಿಗೇರಿ, ಅಂಬಿಕಾ ಮಿಟ್ಟಿ, ರುಕ್ಮಿಣಿ ಗಂಧದ ಕಾರ್ಯಕ್ರಮದಲ್ಲಿದ್ದರು.
ಆರೋಗ್ಯಕರ ಆಹಾರದಿಂದ ಆರೋಗ್ಯಕರ ಸಮಾಜ: ಕವಿತಾ
Advertisement