ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ
ಅಭಿವೃದ್ಧಿ ಕಾರ್ಯಗಳ ಜೊತೆಗೆ ಇಡೀ ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ಗ್ರಾಮದ ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸಿ ಆರೋಗ್ಯಕರ ಸಮಾಜ ನಿರ್ಮಾಣ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.
ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಯಿತು. 1857 ರಿಂದ 1947 ರವರೆಗೆ ಹಲವಾರ ಹೋರಾಟ, ತ್ಯಾಗ ಬಿಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ.
ಅಹಿಂಸೆ, ಸತ್ಯಾಗ್ರಹಗಳಂತಹ ಪರಿಣಾಮಕಾರಿ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆದ ಹೆಮ್ಮೆ ನಮ್ಮದಾಗಿದೆ ಎಂದರು.
ದೇಶದ ನಾಗರಿಕರಾದ ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಮಾಜಿ ಸೈನಿಕರಾದ ಉಮೇಶ ಪತ್ತಾರ, ಬುಡ್ನೇಸಾಬ ಯಲಿಗಾರ, ಮಂಜುನಾಥ್ ಮಠಪತಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕಾವೇರಿ ಹಿರೇಮಠ, ದ್ವಿತೀಯ ಸ್ಥಾನ ಪಡೆದ ಲಕ್ಷ್ಮೀ ಉದುಪುಡಿ, ತೃತೀಯ ಸ್ಥಾನ ಪಡೆದ ಪೂಜಾ ಬಾಗಲೆ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ 75 ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಹಾಗೂ ಗ್ರಾಪಂ ಆವರಣ, ಪಶು ಆಸ್ಪತ್ರೆ, ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಆವರಣ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ 75 ಸಸಿ ನೆಡುವ ಕಾರ್ಯಕ್ರಮಕ್ಕೆ ಅಧ್ಯಕ್ಷ ಮುತ್ತು ರಾಯರಡ್ಡಿ ಸದಸ್ಯರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಬಾಪು ಹಿರೇಗೌಡ್ರ, ಶರಣಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಲಕ್ಷ್ಮಣ ಕಂಬಳಿ, ಈರಮ್ಮ ಮುದಿಗೌಡ್ರ, ಶ್ರುತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ,
ಪಿಡಿಓ ಶೈನಾಜ್ ಮುಜಾವರ, ಕಾರ್ಯದರ್ಶಿ ಕೆಂಚಪ್ಪ ಮಾದರ, ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಾಲಯ ಹಾಗೂ ಪಂಚಾಯತಿ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ನಾಗರಾಜ ಹೂಲಿ, ಅನೀಲ ಕಡ್ಲಿಕೊಪ್ಪ ಕಾರ್ಯಕ್ರಮ ನಡೆಸಿ ಕೊಟ್ಟರು.