ವಿಜಯಸಾಕ್ಷಿ ಸುದ್ದಿ, ಗದಗ
‘ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಗ್ಲುಕೋಸ್ ಬಾಟಲು, ಮಗುವಿನ ಪ್ರಾಣ ಉಳಿಸಲು ಹೆತ್ತವರು ವಾರ್ಡ್ನಿಂದ ವಾರ್ಡ್ ಗೆ ಅಲಿಯುತ್ತಿದ್ದ ಮನಕಲಕುವ ದೃಶ್ಯ ನಗರದ ದುಂಡಪ್ಪ ಮಾನ್ವಿ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಬುಧವಾರ ಕಂಡು ಬಂದಿತು’.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಮಹಾಂತೇಶ ಮತ್ತು ಸಂಗೀತಾ ದಂಪತಿಗಳ ಎರಡೂವರೆ ವರ್ಷದ ದೃವಂತ ಎಂಬ ಮಗುವಿಗೆ ಮೂರ್ಛೆ (ಪಿಟ್ಸ್) ರೋಗ ಬಂದಿತ್ತು. ಹೀಗಾಗಿ ಮಗನ ಚಿಕಿತ್ಸೆಗಾಗಿ ಕೊಪ್ಪಳದಲ್ಲಿರುವ ಜಿಲ್ಲಾ ಆಸ್ಪತ್ರೆಗಿಂತ ಗದಗನ ಜಿಲ್ಲಾಸ್ಪತ್ರೆಯಲ್ಲಿ ಸೌಕರ್ಯ ಇದೆ ಎಂದು ಕೊಪ್ಪಳಕ್ಕೆ ಹೋಗದೇ ನೇರವಾಗಿ ಗದಗ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರೂ ಯಾವೊಬ್ಬ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಆ್ಯಂಬುಲೆನ್ಸ್ನಿಂದ ಮಗುವನ್ನು ಆಸ್ಪತ್ರೆ ಒಳಗೆ ಕರೆದೊಯ್ಯಲು ವ್ಹೀಲ್ ಚೇರ್ ಸ್ಟ್ರಚ್ಚರ್ ಸಹಿತ ಕೊಡದೇ ಅಮಾನವೀಯವಾಗಿ ನಡೆಸಿಕೊಂಡರು.
ಅಲ್ಲದೇ, ಎರಡೂವರೆ ವರ್ಷದ ಮಕ್ಕಳನ್ನು ಇಲ್ಲಿ ನೋಡುವುದಿಲ್ಲ. ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಾ ಹೇಳಿದ್ದಾರೆ. ಸದ್ಯ ಮಗು ನಗರದ ಜಿಮ್ಸ್ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ವಿಭಾಗ(ಪಿಐಸಿಯು) ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಯಲಬುರ್ಗಾದಿಂದ ಆಂಬ್ಯುಲೆನ್ಸ್ ಮೂಲಕ ಮೊದಲು ನಗರದ ಜರ್ಮನಿ ಆಸ್ಪತ್ರೆಗೆ ಬಂದಿದ್ದೇವೆ. ಅವರು ಹೆರಿಗೆ ಆಸ್ಪತ್ರೆಗ ಹೋಗಿ ಅಂತಾ ಹೇಳಿದರು. ಅಲ್ಲಿಂದ ಹೆರಿಗೆ ಆಸ್ಪತ್ರೆಗೆ ಹೋದರೆ ಅಲ್ಲಿ ಯಾರೂ ಮಗು ನೋಡಲಿಲ್ಲ. ಒಂದು ಕೈಯಲ್ಲಿ ಸಲಾಯನ್ ಮತ್ತೊಂದು ಕೈಯಲ್ಲಿ ಮಗುವನ್ನು ಹೊತ್ಕೊಂಡು ಅಲೆದಾಡಿದರೂ ಮಗುವಿಗೆ ಚಿಕಿತ್ಸೆ ನೀಡುವುದಿರಲಿ, ಮುಟ್ಟಿ ಸಹಿತ ಏನಾಗಿದೆ ಎಂದು ಯಾರೊಬ್ಬರೂ ಕೇಳಲಿಲ್ಲ. ಅವರು ಚಿಕಿತ್ಸೆ ನೀಡದೇ ಜಿಮ್ಸ್ ಆಸ್ಪತ್ರೆಗೆ ಹೋಗಿ ಅಂತಾ ಸಾರಾಸಗಟವಾಗಿ ಹೇಳಿ ಕಳುಹಿಸಿದರು. ಅಲ್ಲದೇ, ಸರಿಯಾಗಿಯೂ ಸ್ಪಂದಿಸಲಿಲ್ಲ ಎಂದು ಮಗುವಿನ ತಾಯಿ ಸಂಗೀತಾ ಕಣ್ಣೀರು ಹಾಕಿದರು.
ಮದುವೆಯಾಗಿ ಬಹಳ ವರ್ಷಗಳ ಬಳಿಕ ಮಕ್ಕಳಾಗಿವೆ. ಅದರಲ್ಲಿ ಹಿರಿಯ ಮಗನಿಗೆ ಪಿಟ್ಸ್ ಬಂದಿದ್ದು, ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಆದರೆ,
ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದಿರುವುದು ತುಂಬಾ ಬೇಸರವಾಯಿತು. ಮಗುವನ್ನು ಇಲ್ಲಿಗೆ ಕರೆದುಕೊಂಡು ಬಂದ ಮೇಲೆ ಜಿಮ್ಸ್ ಆಸ್ಪತ್ರೆ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿದರು. ಸದ್ಯ ಮಗು ಆರಾಮವಾಗಿದೆ ಎಂದು ಮಗುವಿನ ತಂದೆ ಮಹಾಂತೇಶ ಹೇಳಿದರು.
ದುಂಡಪ್ಪ ಮಾನ್ವಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಇದೊಂದೇ ಘಟನೆ ಅಲ್ಲ, ಇಂತಹ ಅನೇಕ ಘಟನೆಗಳು ನಡೆದಿರುವ ನಿದರ್ಶನಗಳಿವೆ. ಅಲ್ಲದೇ, ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.